ತಿಂಗಳೊಳಗಾಗಿ ಒಳಮೀಸಲಾತಿ ಜಾರಿಯಾಗಲಿ

IMG_20241204_235725
Published on

ರಾಯಚೂರು: ರಾಜ್ಯದ ಸ್ಥಿತಿಗತಿಗಾನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಧಿಕಾರ ನೀಡಿದ್ದು, ಆದರೆ ಸರ್ಕಾರ ಮಾತ್ರ ಒಳಮೀಸಲಾತಿ ಜಾರಿಗೊಳಿಸದೇ ಕಾಲಹರಣ ಮಾಡುತ್ತಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿನ ಮಿಸಲಾತಿ ವರ್ಗೀಕರಣ ಜಾರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ತಿಂಗಳ ಕಾಲಾವಕಾಶವನ್ನು ಪಡೆದಿದ್ದು, ಒಂದು ತಿಂಗಳ ಒಳಗಾಗಿ ಒಳಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಒಳಮೀಸಲಾತಿ ಜಾರಿ ಮಾಡುವಲ್ಲಿ ಕಾಲಹರಣ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯವನ್ನು ದಿಕ್ಕು ತಪ್ಪಿಸುತ್ತಾ ಅನ್ಯಾಯ ಮಾಡುತ್ತಿದೆ. ಒಂದು ತಿಂಗಳೊಳಗಾಗಿ ಒಳಮೀಸಲಾತಿ ಜಾರಿ ಮಾಡದೇ ಇದ್ದಲ್ಲಿ ಸಿಎಂ ಸಿದ್ದರಾಮಯ್ಯ ಕ್ಷೇತ್ರವಾದ ವರುಣಾದಿಂದ ವಿಧಾನಸೌಧವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಸಂಘದ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಉತ್ತಮವಾಗಿ ಆಡಳಿತ ನಡೆಸುತ್ತಿರುವ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್ ಮುನಿಯಪ್ಪರನ್ನು ದಲಿತ ಮುಖ್ಯಮಂತ್ತಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ರಾಮಕೃಷ್ಣ, ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ, ಪ್ರಮುಖರಾದ ಕಾಶಪ್ಪ ಹೆಗ್ಗಣಗೇರಾ, ವೆಂಕಟರಮಣಪ್ಪ, ಸುರೇಶ, ರಂಜೀತ್, ಗೋವಿಂದ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net