ಒಳಮೀಸಲಾತಿಗೆ ಸರ್ಕಾರದ ಕಾಲಹರಣ: ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ

tamate chaluvali
Published on

ರಾಯಚೂರು: ಒಳಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ ನಾಲ್ಕು ತಿಂಗಳಾದರೂ ಸರ್ಕಾರ ಮೀಸಲಾತಿ ಜಾರಿಗೊಳಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ತಮಟೆ ಚಳವಳಿಯನ್ನು ನಡೆಸಲಾಯಿತು.

ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಕಾಟಚಾರಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವನ್ನು ರಚಿಸಿದೆ. ಆದರೆ ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ ಹಾಗೂ ಹಣಕಾಸಿನ ನೆರವು ನೀಡದೇ ಕಾಲಹರಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಳಮೀಸಲಾತಿ ಜಾರಿಗೆ ಪ್ರತ್ಯೇಕ ಆಯೋಗದ ರಚನೆ ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. 2011 ಜನಗಣತಿ ಅಂಕಿ ಅಂಶಗಳ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಇದೀಗ ಮತ್ತೆ ನಾಗಮೋಹನ್‌ದಾಸ ಆಯೋಗಕ್ಕೆ ಅದೇ ಕೆಲಸವನ್ನು ನೀಡಲಾಗಿದೆ. ಸರ್ಕಾರದ ನಿಧಾನಗತಿಯ ನಿರ್ಲಕ್ಷೃದ ಧೋರಣೆ ನೋಡಿದರೆ ಸರ್ಕಾರಕ್ಕೆ ಅವಕಾಶ ವಂಚಿತ ಪರಿಶಿಷ್ಠ ಜಾತಿಗಳ ಸಮುದಾಯಕ್ಕೆ ಒಳಮೀಸಲಾತಿ ಕೊಡುವ ಆಸಕ್ತಿ ಇಲ್ಲದಂತೆ ಕಂಡುಬರುತ್ತಿದೆ ಎಂದು ಅಸಮಧಾನ ಹೊರಹಾಕಿದರು.

ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ನಂತರ ಬೈಕ್ ರ‌್ಯಾಲಿ ಮೂಲಕ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ ಮನೆ ಮುಂದೆ ತಮಟೆ ಬಾರಿಸುವ ಮೂಲಕ ಹೋರಾಟ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಬಿ.ನರಸಪ್ಪ ದಂಡೋರ, ರವೀಂದ್ರ ಜಲ್ದಾರ, ಪಿ.ಯಲ್ಲಪ್ಪ, ಶಂಶಾಲಂ, ರವಿ ಗಿಲ್ಲೆಸುಗೂರು, ರಂಜೀತ ದಂಡೋರ, ಶಾಂತಪ್ಪ ಮಿಡಗಲದಿನ್ನಿ, ಎಂ.ಪಿ.ರೆಡ್ಡಿ ಗೋನ್ವಾರ, ದುಳ್ಳಯ್ಯ ಗುಂಜಳ್ಳಿ, ಜಕ್ರಪ್ಪ ಹಂಚಿನಾಳ, ಭೀಮೇಶ ತುಂಟಾಪೂರ, ದಾವೀದ್ ಮರ್ಚೆಟಾಳ, ನವೀನಕುಮಾರ ಉಪ್ರಾಳ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net