ಹೆಚ್ಚುವರಿ ದತ್ತಾಂಶಗಳ ಪರಿಗಣನೆ ಅನಗತ್ಯ: ಎಸ್.ಮಾರೆಪ್ಪ

IMG-20241029-WA0017
Published on

ರಾಯಚೂರು: ರಾಜ್ಯ ಸರ್ಕಾರದಿಂದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಪೂರ್ಣಪ್ರಮಾಣದ ತೀರ್ಮಾನವಲ್ಲ ಎಂದು ಎಂಆರ್‌ಎಚ್‌ಎಸ್ ರಾಜ್ಯ ಗೌರವಾಧ್ಯಕ್ಷ ಎಸ್.ಮಾರೆಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಅಂಗೀಕರಿಸಿರುವ ಸರ್ಕಾರ, ಹುದ್ದೆಗಳ ಭರ್ತಿಗೆ ತಡೆಹಿಡಿದಿರುವುದು ಸ್ವಾಗತಾರ್ಹ ಆದರೆ ಮೂರು ತಿಂಗಳ ಕಾಲಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ಕ್ರೂಡಿಕರಿಸುವ ಹೆಚ್ಚುವರಿ ದತ್ತಾಂಶಗಳ ಪರಿಗಣನೆ ಅನಗತ್ಯ ಎಂದು ವಿರೋಧ ವ್ಯಕ್ತಪಡಿಸಿದರು.

ಒಳಮೀಸಲಾತಿ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವುದು ಭಾಗಶಃ ತೀರ್ಮಾನವಾಗಿದ್ದು, ಈ ಹಿಂದೆ ಮಾದಿಗ ಮತ್ತು ಇತರೆ ಸಮುದಾಯಗಳಿಂದ ಉಪ ಚುನಾವಣೆಗಳಲ್ಲಿ ಸೋಲಿಸುವ ಕುರಿತು ತೆಗೆದುಕೊಂಡಿದ್ದ ತೀರ್ಮಾನಕ್ಕೆ ಮಣಿದು ತರಾತುರಿಯಲ್ಲಿ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದರು.

ಈಗಾಗಲೇ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಗೆ ಕ್ರಮ ವಹಿಸಲಾಗಿದ್ದು, ಆದರೆ ಕರ್ನಾಟಕ ರಾಜ್ಯದಲ್ಲಿ ಮೂರು ತಿಂಗಳ ಕಾಲಮಿತಿ ನಿಗಧಿಪಡಿಸಿರುವುದು ಒಳಮೀಸಲಾತಿ ವಿರೋಧಿಗಳ ಓಲೈಕೆಯಾಗಿದೆ. ಜತೆಗೆ ಒಳ ಮಿಸಲಾತಿ ಹೋರಾಟದ ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಯ ಅಕ್ಕರಕಿ, ಹೇಮರಾಜ್ ಅಸ್ಕಿಹಾಳ, ತಾಯಪ್ಪ ಗದಾರ್, ಶ್ರೀನಿವಾಸ ಕೊಪ್ಪರ, ಅರ್ಜುನ ಕೊಪ್ಪರ, ನರಸಿಂಹಲು, ಅಬ್ರಾಹಂ, ನರಸಿಂಹಲು ಮರ್ಚಟಾಳ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net