

ರಾಯಚೂರು: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿ ನಂತರ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿಯಿಂದ ಬುಧವಾರ ನಗರದ ಡಿಸಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಲಾಯಿತು.
ಮೊದಲಿಗೆ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ಡಿಸಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸುವ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಬೆಳಿಗ್ಗೆಯಿಂದಲೇ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುತ್ತಿಗೆ ಹಾಕುವ ವೇಳೆ ಕೆಲ ಪೊಲೀಸರಿಗೆ ಗಾಯಗಳಾಗಿರುವುದು ಕಂಡು ಬಂದಿತು.
ಒಳ ಮೀಸಲಾತಿ ಜಾರಿಗೊಳಿಸದೇ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 50 ಸಾವಿರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳುತ್ತಿದ್ದು, ಇದರಿಂದ ಅಸ್ಪರ್ಶ್ಯ ಸಮುದಾಯದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕೂಡಲೇ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದನ್ವಯ ಒಳ ಮೀಸಲಾತಿ ಜಾರಿ ಮಾಡಲು ಮುಂದಾಗಬೇಕು ಎನ್ನುವುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು.
ಸುಪ್ರೀ ಕೋರ್ಟ್ ತೀರ್ಪು ನೀಡಿ ಎರಡು ತಿಂಗಳು ಕಳೆದರೂ ಈವರೆಗೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸದೇ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಮೂರು ಪೊಲೀಸ್ ಬಸ್ ಹಾಗೂ ಒಂದು ಸಾರಿಗೆ ಬಸ್‌ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೋಯ್ದು, ನಂತರ ಬಿಡುಗಡೆಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಅಂಬಣ್ಣ ಅರೋಲಿಕರ್, ಎಂ.ವಿರೂಪಾಕ್ಷಿ, ನರಸಪ್ಪ ದಂಡೋರಾ, ಎಸ್.ಮಾರೆಪ್ಪ, ಗಣೇಶ್, ನರಸಿಂಹಲು, ಹನುಮಂತ ಮನ್ನಾಪುರಿ, ಭೀಮಣ್ಣ ಮಂಚಾಲ, ರಂಜಿತ್, ಶಂಸಾಲಂ, ಮಾನಪ್ಪ ಮೇಸ್ತ್ರಿ, ರಾಘವೇಂದ್ರ ಬೋರೆಡ್ಡಿ, ಎಸ್.ಹುಲಿಗೆಪ್ಪ, ನೀಲಕಂಠ, ಬಸವರಾಜ್, ಅನಿಲ್, ಜನಾರ್ಧನ ಸೇರಿದಂತೆ ಇತರರಿದ್ದರು.