ಆಯೋಗಕ್ಕೆ ಸಮುದಾಯದ ಪ್ರತಿನಿಧಿಗಳನ್ನು ನೇಮಿಸಿ: ರವೀಂದ್ರನಾಥ ಪಟ್ಟಿ

IMG-20241211-WA0018
Published on

ರಾಯಚೂರು: ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ವರ್ಗೀಕರಣ ಜಾರಿ ಮಾಡಲು ರಚಿಸಿರುವ ಏಕ ಸದಸ್ಯ ಆಯೋಗಕ್ಕೆ ಪರಿಶಿಷ್ಟ ಜಾತಿಗಳ ತಲಾ ಒಂದು ಸಮುದಾಯಗಳ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಛಲವಾದಿ ಮಹಾಸಭಾದ ಕೋರ್ ಕಮಿಟಿ ಸದಸ್ಯ ರವೀಂದ್ರನಾಥ ಪಟ್ಟಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಗೊಳಿಸಲು ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಮೂರ್ತಿಗಳ ಪೀಠ ರಾಜ್ಯಗಳಿಗೆ ಅಧಿಕಾರ ನೀಡಿದೆ. ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ ನೇತೃತ್ವದ ಏಕಸದಸ್ಯ ಆಯೋಗ ರಚಿಸಲಾಗಿದೆ. ಇದರಿಂದ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುವದಿಲ್ಲ. ನಿವೃತ್ತ ನ್ಯಾಯಮೂರ್ತಿಗಳಿಗೆ ಪರಿಶಿಷ್ಟ ಜಾತಿಗಳ ವರ್ಗೀಕರಣದ ಮಾಹಿತಿ ಇರುವುದಿಲ್ಲ. ಮಾನವಶಾಸ್ತ್ರ ತಜ್ಞರನ್ನು ನೇಮಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳ ಕುರಿತು ಸಂಪೂರ್ಣ ಮಾಹಿತಿ ಸಿಗಲು ಸಾಧ್ಯವಾಗುತ್ತದೆ. ಏಕ ಸದಸ್ಯ ಆಯೋಗ ಮೂರು ತಿಂಗಳಲ್ಲಿ ಎಲ್ಲಾ ಪರಿಶಿಷ್ಟ ಜಾತಿಗಳ ಮಾಹಿತಿ, ಜನಸಂಖ್ಯೆ ಕುರಿತು ಖಚಿತ ದತ್ತಾಂಶ ಸಂಗ್ರಹಿಸಲು ಸಾಧ್ಯವಿಲ್ಲ ಎಂದರು.

ಛಲವಾದಿ, ಮಾದಿಗ, ಲಂಬಾಣಿ, ಭೋವಿ, ಕೊರಚ, ಕೊರಮ ಹಾಗೂ ಇತರೆ ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಬೇಕು. ಇಲ್ಲದೇ ಹೋದಲ್ಲಿ ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಲಿದೆ. ನಿರ್ಲಕ್ಷೃ ವಹಿಸಿದರೇ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಮಿತ್ರ, ಮಹಾಸಭಾದ ಸಂಚಾಲಕ ಭಾಸ್ಕರರಾಜ್, ಪ್ರಮುಖರಾದ ನರಸಿಂಹಲು ನೆಲಹಾಳ, ಕೆ.ಯಲ್ಲಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net