ಕೈಗಾರಿಕಾ ಪ್ರದೇಶದ ಜಮೀನು ಸರ್ವೇ ನಡೆಸಿ

Mallayya Kattimani
ಮಲ್ಲಯ್ಯ ಕಟ್ಟಿಮನಿ, ಪ್ರಧಾನ ಸಂಚಾಲಕ, ದೇವದುರ್ಗ ಕೈಗಾರಿಕಾ ಅಭಿವೃದ್ಧಿ ಹೋರಾಟ ಸಮಿತಿ.
Published on

ರಾಯಚೂರು: ದೇವದುರ್ಗದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಮೀಸಲಿಟ್ಟಿರುವ ಜಮೀನಿನ ಸರ್ವೇ ನಡೆಸಿ, ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ದೇವದುರ್ಗ ಕೈಗಾರಿಕಾ ಅಭಿವೃದ್ಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಲ್ಲಯ್ಯ ಕಟ್ಟಿಮನಿ ಒತ್ತಾಯಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಪಟ್ಟಣದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 1992ರಲ್ಲಿ 29.31 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಕಳೆದ 30 ವರ್ಷಗಳಿಂದ ಪ್ರದೇಶವನ್ನು ಅಭಿವೃದ್ಧಿಪಡಿಸಿಲ್ಲ ಎಂದರು. ಅಭಿವೃದ್ಧಿಯ ಹರಿಕಾರ ಎಂದು ಕರೆಯಿಸಿಕೊಳ್ಳುವ ಶಾಸಕ ಕೆ.ಶಿವನಗೌಡ ನಾಯಕ, 4 ಬಾರಿ ಶಾಸಕರಾದರೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ಸ್ವಾಧೀನ ಪಡಿಸಿಕೊಂಡ ಭೂಮಿ ಮಾಲೀಕರಿಗೆ ಪರಿಹಾರ ನೀಡಲಾಗಿದ್ದು, ಪ್ರದೇಶದ ಹದ್ದುಬಸ್ತು ಮಾಡಲಾಗಿಲ್ಲ.

ಕೈಗಾರಿಕೆ ಪ್ರದೇಶದಲ್ಲಿನ ಸ್ಥಳನವನ್ನು ಕೆಲವು ಪ್ರಭಾವಿಗಳು ಬಾಡಿಗೆ ನೀಡಲು ಹೊರಟಿದ್ದು, ಕೆಐಎಡಿಬಿ ಅಧಿಕಾರಿಗಳು ಕೈಗಾರಿಕೆ ಪ್ರದೇಶದ ಸರ್ವೇ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಸರ್ವೇ ಮಾಡಲು ಬಂದಿದ್ದ ಅಧಿಕಾರಿಗಳನ್ನು ಒತ್ತಡ ಹಾಕಿ ಹಿಂದಕ್ಕೆ ಕಳುಹಿಸಿದ್ದರು. ಜಿಲ್ಲಾಧಿಕಾರಿ ಕೂಡಲೇ ಸರ್ವೇಗೆ ಆದೇಶಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದರು. ಪದಾಧಿಕಾರಿಗಳಾದ ಜೆ.ಬಸವರಾಜ ನಾಯಕ, ಶಿವಪ್ಪ ಬಲ್ಲಿದ್, ಮಹೆಬೂಬ್ ಸಾಬ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net