ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಕಂಟಕವಾದ ನಿರಂತರ ಮಳೆ

Raichur Cotton crop damege
ಜೇಗರ್‌ಕಲ್ ಗ್ರಾಮದಲ್ಲಿ ಹತ್ತಿ ಕಾಯಿಗಳು ಗಿಡದಲ್ಲೇ ಕಪ್ಪಾಗಿರುವುದು.
Published on

ಉದುರುತ್ತಿವೆ ಕಾಯಿಗಳು | ರೈತರಲ್ಲಿ ನಷ್ಟದ ಆತಂಕ | ಕಡಿಮೆಯಾಗಲಿದೆ ಇಳುವರಿ

ಶಶಿಧರ ಅಂಗಡಿ

ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಈ ಪೈಕಿ ಹತ್ತಿ ಬೆಳೆಗೆ ಅತಿ ಹೆಚ್ಚು ಹಾನಿ ಉಂಟಾಗಿದೆ
.
ಆಗಸ್ಟ್‌ನಿಂದ ಈವರೆಗೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹೊಲಗಳಲ್ಲಿ ನೀರು ನಿಂತು ತೇವಾಂಶ ಹೆಚ್ಚಾಗಿ ಹತ್ತಿ ಬೆಳೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಹತ್ತಿ ಬೆಳೆಯಲಾಗಿದೆ 1.53 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದು, 1.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಗುರಿಗಿಂತ ಶೇ.113.17 ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ಆದರೆ, ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಹತ್ತಿ ಬೆಳೆ ಹಾಳಾಗಿ ರೈತರು ಆತಂಕದಲ್ಲಿದ್ದಾರೆ.

ಅತಿಯಾದ ತೇವಾಂಶ ಕಾರಣದಿಂದ ಕಾಯಿಗಳು ಕೊಳೆಯುವುದು, ಕೆಂಪಾಗುವುದು, ಹಲವು ರೋಗಗಳಿಗೆ ತುತ್ತಾಗುತ್ತಿರುವ ಹತ್ತಿ ಬೆಳೆಯನ್ನು ಕೆಲವು ರೈತರು ಕಿತ್ತು ಹಾಕುತ್ತಿದ್ದಾರೆ. ಸತತ ಮಳೆಯಾಗುತ್ತಿರುವ ಕಾರಣ ನೆಲ ಹೆಚ್ಚು ತಂಪಾಗಿ ಹತ್ತಿ ಕಾಯಿಗಳು ಮತ್ತು ಮೊಗ್ಗುಗಳು ಉದುರಿ ಬೀಳುತ್ತಿವೆ. ಇದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ತಗ್ಗು ಪ್ರದೇಶದ ಹೊಲಗಳಲ್ಲಿ ಬಿತ್ತನೆ ಮಾಡಲಾದ ಹತ್ತಿಗೆ ಹೆಚ್ಚಿನ ಹಾನಿ ಉಂಟಾಗುತ್ತಿದ್ದು, ನಿರಂತರ ಮಳೆ ಹತ್ತಿ ಬೆಳೆಗೆ ಸೂಕ್ತವಾದುದ್ದಲ್ಲ ಎಂಬುವುದು ರೈತರ ಅಭಿಪ್ರಾಯವಾಗಿದೆ. ಹತ್ತಿ ಬೆಳೆದಿರುವ ಹೊಲಗಳಲ್ಲಿ ನಿಂತ ಮಳೆ ನೀರನ್ನು ಹಲವು ರೈತರು ಹೊರ ಹಾಕಲು ಹರಸಾಹಸ ಪಡುವಂತಾಗಿದೆ.

ಜಿಲ್ಲೆಯಲ್ಲಿ 1621 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ ಎಂದು ಕೃಷಿ ಇಲಾಖೆಯಿಂದ ಅಂದಾಜಿಸಲಾಗಿದೆ. 662 ಹೆಕ್ಟೇರ್ ಹತ್ತಿ ಬೆಳೆಗೆ ಹಾನಿ ಉಂಟಾಗಿದೆ. ಜೂನ್‌ನಿಂದ ಸೆ.9ರ ವೇಳೆಗೆ ಜಿಲ್ಲೆಯಲ್ಲಿ 323 ಮಿ.ಮೀ. ವಾಡಿಕೆಯ ಮಳೆಯಾಗಬೇಕಿತ್ತು 410 ಮಿ.ಮೀ. ಮಳೆಯಾಗಿದೆ. ಶೇ.27 ಅಧಿಕ ಮಳೆ ಸುರಿದಿದೆ.

1621 ಹೆಕ್ಟೇರ್ ಪ್ರದೇಶದಲ್ಲಿ ಹಾನಿ

ಕೃಷಿ ಇಲಾಖೆಯ ಪ್ರಾಥಮಿಕ ವರದಿಯ ಪ್ರಕಾರ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಗೆ ಒಟ್ಟು 1621 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಭತ್ತ 380 ಹೆಕ್ಟೇರ್, ಸಜ್ಜೆ 147, ತೊಗರಿ 353, ಸೂರ್ಯಕಾಂತಿ 62, ಹತ್ತಿ 662 ಹಾಗೂ ಏಳು ಹೆಕ್ಟೇರ್ ಹೆಸರು ಬೆಳೆಗೆ ಹಾನಿ ಉಂಟಾಗಿದೆ. ಪೂರ್ಣಪ್ರಮಾಣದ ಸರ್ವೇ ನಂತರ ಬೆಳೆ ಹಾನಿಯ ನಿಖರ ಮಾಹಿತಿ ತಿಳಿಯಲಿದೆ.

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಳೆಗಳಿಗೆ ಹಾನಿ ಉಂಟಾಗುತ್ತಿರುವು ದನ್ನು ಸರ್ಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಆದೇಶಗಳಿಗೆ ಕಾಯದೆ ಗ್ರಾಮ ಲೆಕ್ಕಾಧಿಕಾರಿಗಳು ಹಾನಿ ಸಮೀಕ್ಷೆ ಆರಂಭಿಸಬೇಕು.| ಚಾಮರಸ ಮಾಲಿಪಾಟೀಲ್ ಕರ್ನಾಟಕ ರಾಜ್ಯ ರೈತಸಂಘದ ಗೌರವಾಧ್ಯಕ್ಷ, ರಾಯಚೂರು

ನಿರಂತರ ಮಳೆಯ ಕಾರಣ ಹತ್ತಿ ಬೆಳೆಗೆ ಹಲವು ರೋಗಗಳು ಬರುತ್ತವೆ. ಅತಿಯಾದ ತೇವಾಂಶದಿಂದ ಬೆಳೆಗೆ ಹಾನಿ ಉಂಟಾಗುತ್ತದೆ. ಪ್ರಾಥಮಿಕವಾಗಿ ಹೊಲದಲ್ಲಿ ನಿಂತ ನೀರನ್ನು ಹೊರ ಹಾಕಿ, ಭೂಮಿ ಒಣಗಿದ ನಂತರ ಅಗತ್ಯ ರಸಗೊಬ್ಬರ, ಔಷಧ ಸಿಂಪಡಣೆ ಮಾಡಬಹುದಾಗಿದೆ.| ಜಯಪ್ರಕಾಶ ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net