ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಳ್ಳಿ

17082022 rcr kumar
Published on

ರಾಯಚೂರು: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸಲಾಗುತ್ತಿರುವ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠನಕ್ಕೆ ಕ್ರಮಕೈಗೊಳ್ಳಬೇಕು. ಜಿಲ್ಲೆಗೆ ವಸತಿ ನಿಲಯ ಮತ್ತು ವಸತಿ ಶಾಲೆಗಳನ್ನು ಮಂಜೂರು ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಕುಮಾರ ಬಂಗಾರಪ್ಪಗೆ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿ, ಬಹುತೇಕ ಯೋಜನೆಗಳನ್ನು ಸರ್ಕಾರ ಕಡಿತಗೊಳಿಸಿದ್ದು, ಉಳಿದ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ ಎಂದರು.
ವಿದ್ಯಾರ್ಥಿ ವೇತನ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದ್ಯಾಸಿರಿ, ಶುಲ್ಕ ಮರುಪಾವತಿ, ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಗಳ ಫಲ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕು. ಸರ್ಕಾರಿ, ಅನುದಾನಿತ ಶಾಲೆ ಮಕ್ಕಳಿಗೆ ನೀಡಲಾಗುತ್ತಿರುವ ಸೈಕಲ್ ಯೋಜನೆಯನ್ನು ಇತರ ಶಾಲೆಗಳಿಗೂ ವಿಸ್ತರಿಸಬೇಕು.
ಜಿಲ್ಲೆಯಲ್ಲಿ ವಸತಿ ನಿಲಯ, ವಸತಿ ಶಾಲಾ ಕಟ್ಟಡ ನಿರ್ಮಿಸಲಾಗಿದ್ದರೂ ಆರಂಭವಾಗಿಲ್ಲ. ಪ್ರಾರಂಭಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಹಿಂದಿ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಯಿತು. ಒಕ್ಕೂಟದ ಸಂಚಾಲಕ ಡಾ.ರಜಾಕ್ ಉಸ್ತಾದ್, ಪದಾಧಿಕಾರಿಗಳಾದ ಶಿವಕುಮಾರ ಯಾದವ್, ವೀರೇಶ ಹೀರಾ, ಅಬ್ದುಲ್ ಹೈ ಫಿರೋಜ್, ಮುಖಂಡ ಬಾಬುರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net