

ರಾಯಚೂರು: ಅಧಿಕಾರಿಗಳು ಇಲಾಖೆ ಪ್ರಗತಿ ವರದಿ ನೀಡುವಾಗ ಕಾಮಗಾರಿ ಆರಂಭವಾಗಿರುವ ಹಾಗೂ ಕಾಮಗಾರಿ ಪೂರ್ಣಗೊಳಿಸುವ ದಿನಾಂಕದ ಮಾಹಿತಿಯನ್ನು ನಮೂದಿಸಬೇಕು. ಇಲ್ಲವಾದಲ್ಲಿ ಸಭೆಯಲ್ಲಿ ಸಣ್ಣಪುಟ್ಟ ವಿಷಯಗಳ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುವಂತಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಸ್ಥಳೀಯ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಸಿದ್ದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮರ್ಪಕ ಮಾಹಿತಿಯಿಲ್ಲದಿದ್ದಲ್ಲಿ ಹಳೇ ಸಮಸ್ಯೆಗಳು ಹಾಗೂ ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚೆ ಮಾಡುವಂತಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವರದಿಯಲ್ಲಿ ಸಮರ್ಪಕ ಮಾಹಿತಿ ಒದಗಿಸಿದಲ್ಲಿ ಅನುಕೂಲವಾಗಲಿದೆ ಎಂದರು.
ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಬರದಿರುವ ಕುರಿತು ಶಾಸಕರು ಸಭೆ ಗಮನಕ್ಕೆ ತಂದು, ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಲಾಗುತ್ತಿಲ್ಲ. 104ನೇ ಮೈಲ್‌ನಲ್ಲಿ ಸಮರ್ಪಕ ಗೇಜ್ ನಿರ್ವಹಣೆ ಮಾಡಿದರೆ ಕೊನೆಭಾಗಕ್ಕೆ ನೀರು ತಲುಪಲಿದ್ದು, ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ರೈತರಿಗೆ ಇದುವರೆಗೂ ಪರಿಹಾರ ಬಂದಿಲ್ಲ ಎಂದು ಶಾಸಕರು ದೂರಿದಾಗ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ ಕೆಲವೊಂದು ರೈತರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಿಗೆ ಹೊಂದಾಣಿಕೆಯಾಗದೆ ಸಮಸ್ಯೆಯಾಗಿದೆ. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಶಂಕರ ಪಾಟೀಲ್ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದೆ. ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಮರಳು ಸಾಗಿಸುವ ಟಿಪ್ಪರ್‌ಗಳನ್ನು ಬಿಟ್ಟು ಮನೆ ಕೆಲಸಕ್ಕೆ ಮರಳು ತೆಗೆದುಕೊಂಡು ಹೋಗುವ ಟ್ರಾಕ್ಟರ್‌ಗಳಿಗೆ ಸಾವಿರಾರು ದಂಡ ವಿಧಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ದದ್ದಲ್ ದೂರಿದರು.
ತಾಲೂಕಿನ ಕರೇಕಲ್, ಕಾಡ್ಲೂರು, ಜೇಗರಕಲ್ ಸೇರಿ ಹಲವೆಡೆ ಟಿಪ್ಪರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಮರಳು ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಎಲ್ಲಿಯೂ ಚೆಕ್‌ಪೋಸ್ಟ್‌ಗಳಿಲ್ಲ ಎಂದಾಗ, ಹೊಸ ಮರಳು ನೀತಿಯನ್ನು ಮಾ.15ರೊಳಗೆ ಜಾರಿ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ವಿಶ್ವನಾಥ ಸಭೆಗೆ ತಿಳಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ರಾಜಾರೋಷವಾಗಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಆದರೆ ಸರ್ಕಾರಕ್ಕೆ ಸಮರ್ಪಕ ರಾಜಸ್ವ ಸಂಗ್ರಹವಾಗುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಕೇಂದ್ರ ಇಲಾಖೆಗೆ ದೂರು ನೀಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಾಲೆಗಳಿಗೆ ಭೂಮಿ ದಾನ ನೀಡಲಾಗಿದ್ದರೂ ಶಿಕ್ಷಣ ಇಲಾಖೆ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳದ ಕಾರಣ ಈಗ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ದೇಣಿಗೆ ನೀಡಿದ ಭೂಮಿಯನ್ನು ಶಿಕ್ಷಣ ಇಲಾಖೆ ಹೆಸರಿಗೆ ಮಾಡಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಶಾಸಕರಾದ ಕೆ.ಶಿವನಗೌಡ ನಾಯಕ, ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಬಸನಗೌಡ ತುರ್ವಿಹಾಳ, ಎಂಎಲ್ಸಿ ಶರಣಗೌಡ ಬಯ್ಯಪುರ, ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್, ಜಿ.ಪಂ. ಸಿಇಒ ನೂರ್ ಜಹರಾ ಖಾನಂ, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.