

ರಾಯಚೂರು: ಮಾನವ ಕಳ್ಳ ಸಾಗಾಣಿಕೆ ತಡೆಗೆ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಈ ಅಪರಾಧವನ್ನು ತಡೆಗಟ್ಟಬಹುದಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ದರಾಮಪ್ಪ ಕಲ್ಯಾಣರಾವ್ ಹೇಳಿದರು.
ನಗರದ ಸ್ಟೇಷನ್ ಬಜಾರ್ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಇದನ್ನೂ ಓದಿ: ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸೋಣ
ಮಾನವರನ್ನು ಕೊಂಡುಕೊಳ್ಳುವ ಹಾಗೂ ಮಾರಾಟ ಮಾಡುವ ಅವಕಾಶವು ಕಾನೂನಿನಲ್ಲಿಲ್ಲ ಮತ್ತು ಇದು ಅಪರಾಧವಾಗಿರುತ್ತದೆ. ಮಕ್ಕಳನ್ನು ದುಡ್ಡಿಗಾಗಿ ಮಾರಾಟ ಮಾಡಲಾಗುತ್ತದೆ. ದೇಶದಲ್ಲಿ ಒಂದು ನಿಮಿಷಕ್ಕೆ 8 ಜನರನ್ನು ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಜನರು ಜಾಗೃತರಾಗಬೇಕು ಮತ್ತು ಈ ಕೃತ್ಯವನ್ನು ತಡೆಗಟ್ಟಲು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಆದ್ದರಿಂದ ಮಕ್ಕಳನ್ನು ಹಾಗೂ ಮಹಿಳೆಯರನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಅಪರಾಧ ಕಂಡುಬಂದಲ್ಲಿ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುದುಕಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಸೇರಿದಂತೆ ಇತರರಿದ್ದರು.