

ರಾಯಚೂರು: ಹೂಗಾರ ಮಾದಯ್ಯ ದಂಪತಿ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರ ಮನೆಗಳಿಗೆ ನಿತ್ಯವೂ ಹೂಮಾಲೆ ಮತ್ತು ಪತ್ರಿ ಕೊಡುವ ಕಾಯಕವನ್ನು ಮಾಡುತ್ತಾ ಜಂಗಮ ದಾಸೋಹ ಮಾಡಿಕೊಂಡು ಸಾರ್ಥಕ ಜೀವನ ಸಾಗಿಸುತ್ತಿದ್ದರು ಎಂದು ಸಾಹಿತಿ ಮತ್ತು ಚಿಂತಕ ಅಮರಗುಂಡಪ್ಪ ಹೂಗಾರ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣ ಹೂಗಾರ ಮಾದಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿ, ಕಾಯಕದಲ್ಲಿ ಅತ್ಯಂತ ನಿಷ್ಠೆ ಉಳ್ಳವರಾಗಿದ್ದ ಹೂಗಾರ ಮಾದಯ್ಯ ದಂಪತಿ, ಜಾತಿ ವರ್ಣ ವರ್ಗ ಭೇದವಿಲ್ಲದೆ ಎಲ್ಲಾ ಶರಣರಿಗೂ ಪುಷ್ಪಗಳನ್ನು ನೀಡುವ ಸೇವೆಯನ್ನು ಮಾಡುತ್ತಿದ್ದರು ಎಂದು ತಿಳಿಸಿದರು.
ಇದೇ ವೇಳೆ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ನವರಾತ್ರಿ ಅಂಗವಾಗಿ ಅ.4, 5 ಮತ್ತು 6ರಂದು ಸಂಜೆ 6 ರಿಂದ 9 ಗಂಟೆಯವರೆಗೆ ಬಸವ ಕೇಂದ್ರದಲ್ಲಿ, 12ನೇ ಶತಮಾನದ ಶಿವಶರಣೆಯರ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿದಿನ ಅನುಭವಿಗಳಿಂದ ವಿಶೇಷ ಚಿಂತನೆ, ವಚನ ನೃತ್ಯ, ಶರಣರ ವೇಷಭೂಷಣ, ಬಸವಾದಿ ಶರಣರ ಸಂದೇಶಗಳನ್ನು ಸಾರುವ ವಿಶೇಷ ರೂಪಕ ಕಾರ್ಯಕ್ರಮ ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ್ ಸಜ್ಜನ್, ಚನ್ನಬಸವಣ್ಣ ಮಹಾಜನ್‌ಶೆಟ್ಟಿ, ಶಿವಕುಮಾರ್ ಮಾಟೂರು, ಶಂಕರಗೌಡ, ರಾಘವೇಂದ್ರ ಆಶಾಪುರ ಸೇರಿದಂತೆ ಇತರರಿದ್ದರು.