ರಾಯಚೂರು ಜಿಲ್ಲೆಯಾದ್ಯಂತ ತುಂತುರು ಮಳೆ

Devadurga Rain Alikallu
ಗಲಗ ಗ್ರಾಮದಲ್ಲಿ ಆಲಿಕಲ್ಲ ಮಳೆ ಬಿದ್ದಿರುವುದು.
Published on

ರಾಯಚೂರು: ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ರಾಯಚೂರು ನಗರ ಸೇರಿ ಹಲವೆಡೆ ರಾತ್ರಿ 7.30 ರಿಂದ ಗುಡುಗು, ಸಿಡಿಲಿನಿಂದ ಕುಡಿದ ತುಂತುರು ಮಳೆ ಸುರಿಯಲಾರಂಭಿಸಿದೆ.

ಮೋಡ ಕವಿದ ವಾತಾವರಣದ ಜತೆಗೆ ಹೆಚ್ಚಿನ ಸೆಖೆಯ ವಾತಾವರಣವಿದ್ದು ಕಾರಣ ಮಳೆಯಾಗುವ ಸಾಧ್ಯತೆಗಳು ಕಂಡು ಬಂದಿತ್ತು. ರಾತ್ರಿಯಾದ ನಂತರ ತುಂತುರು ಮಳೆ ಆರಂಭವಾಗದ್ದರಿಂದ ಜನರು ಅಲ್ಪ ಮಟ್ಟಿಗೆ ತಂಪು ವಾತಾವರಣ ಕಾಣುವಂತಾಯಿತು. ಅರ್ಧ ಗಂಟೆ ಸುರಿದ ಮಳೆ ನಿಂತಿದ್ದರೂ ರಾತ್ರಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳು ಕಂಡು ಬಂದಿದ್ದವು. ಅಕಾಲಿಕ ಮಳೆಯಿಂದ ಭತ್ತದ ರಾಶಿ ಮಾಡುವ ರೈತರಲ್ಲಿ ಆತಂಕ ಮೂಡಿದೆ.

ಸಿಡಿಲು ಬಡಿದು ಎತ್ತು ಸಾವು
ಅರಕೇರಾ: ತಾಲೂಕಿನ ಗಲಗ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವಿಗೀಡಾದ ಘಟನೆ ಗುರುವಾರ ನಡೆದಿದೆ. ಗುಡುಗು-ಸಿಡಿಲು ಸಹಿತ ಸಂಜೆ ಸುರಿದ ಅಕಾಲಿಕ ಮಳೆಗೆ ಹನುಮಂತ ಗೊಲ್ಲರ ಅವರ ಜಮೀನಿನ ಮರದ ಕೆಳಗೆ ಕಟ್ಟಿಹಾಕಿದ್ದ ಎರಡು ಎತ್ತುಗಳ ಪೈಕಿ ಒಂದು ಮೃತಪಟ್ಟಿದೆ.

ಗಲಗ ಗ್ರಾಮದಲ್ಲಿ ಸಿಡಿಲಿಗೆ ಎತ್ತು ಸಾವು
ದೇವದುರ್ಗ: ತಾಲೂಕಿನ ಜಾಲಹಳ್ಳಿ ಸಮೀಪದ ಗಲಗ ಗ್ರಾಮದಲ್ಲಿ ಗುರುವಾರ ಸಂಜೆ ಆಲಿಕಲ್ಲು ಮಳೆ ಸುರಿದಿದ್ದು, ಸಿಡಿಲಿಗೆ ಒಂದು ಎತ್ತು ಬಲಿಯಾಗಿದೆ. ರೈತ ಹನುಮಂತ ಅಮರೇಶ ಗೊಲ್ಲರ್ ಎನ್ನುವವರ ಎತ್ತು ಬಲಿಯಾಗಿದೆ.ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿತ್ತು. ಸಂಜೆ ಗಲಗ ಭಾಗದಲ್ಲಿ ಭಾರಿ ಬಿರುಗಾಳಿ, ಗುಡುಗು ಸಿಡಿಲಿನ ಅರ್ಭಟದ ನಡುವೆ ಧಾರಾಕಾರ ಆಲಿಕಲ್ಲ ಮಳೆ ಸುರಿಯಿತು. ಮಳೆಗಾಳಿಗೆ ಹಲವು ಮನೆಗಳು, ರೈತರ ಬಣವೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿವೆ. ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆ ಸುರಿಯಿತು.

ಆತಂಕ: ಬಿರುಗಾಳಿ ಸಹಿತ ಮಳೆ ಸುರಿದ ಕಾರಣ ತಾಲೂಕಿನ ರೈತರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ನಾರಾಯಣ ಬಲದಂಡೆ ನಾಲೆ, ಕೃಷ್ಣಾ ನದಿಯ ನೀರಿನಿಂದ ರೈತರು ಬೇಸಿಗೆ ಎರಡನೇ ಬೆಳೆ ಭತ್ತ ಬೆಳೆದಿದ್ದು, ಸದ್ಯ ಫಸಲು ಹಿಡಿದಿವೆ. ಈ ಹಂತದಲ್ಲಿ ಮಳೆ ಸುರಿದರೆ ಭತ್ತ ನೆಲಕ್ಕುರಳಲಿದೆ. ಅಲ್ಲದೆ ಮೆಣಸಿನಕಾಯಿ ಬಿಡಿಸಿ ಜಮೀನಿನಲ್ಲಿ ಒಣಗಲು ಹಾಕಿದ್ದು ಮಳೆಯಿಂದ ಹಾಳಾಗುವ ಆತಂಕ ಎದುರಾಗಿದೆ. ಹತ್ತಿಗೆ ಬೆಲೆ ಇಲ್ಲದ ಕಾರಣ ಹಲವು ರೈತರು ಮಾರಾಟ ಮಾಡದೆ ಹತ್ತಿ ಜಮೀನಿನಲ್ಲಿ ಸಂಗ್ರಹಿಸಿದ್ದಾರೆ. ಮಳೆಯಿಂದ ಹಾಳಾಗುವ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net