ದೇಶಾದ್ಯಂತ ಪ್ಲಾಸ್ಟಿಕ್ ಧ್ವಜ ನಿಷೇಧವಾಗಲಿ; ಹಿಂದು ಜನಜಾಗೃತಿ ಸಮಿತಿಯಿಂದ ಡಿಸಿಗೆ ಮನವಿ

31072022 raichur plastic flag ban
Published on

ರಾಯಚೂರು: ದೇಶಾದ್ಯಂತ ಆ.15ರ ಸ್ವಾತಂತ್ರೃ ದಿನಾಚರಣೆಯಂದು ಪ್ಲಾಸ್ಟಿಕ್ ಧ್ವಜಗಳ ಮಾರಾಟ ಹಾಗೂ ಧ್ವಜಾರೋಹಣ ನಿಷೇಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಹಿಂದು ಜನಜಾಗೃತಿ ಸಮಿತಿ ಶನಿವಾರ ಮನವಿ ಸಲ್ಲಿಸಿತು.

ಪ್ರತಿವರ್ಷ ಸ್ವಾತಂತ್ರೃ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸಿ ನಂತರ ಎಲ್ಲೆಂದರಲ್ಲಿ ಬಿಸಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗುತ್ತಿದೆ. ನಿಷೇಧಿಸಿತ ಪ್ಲಾಸ್ಟಿಕ್‌ಗಳನ್ನು ಧ್ವಜದ ರೂಪದಲ್ಲಿ ಮುದ್ರಿಸಿ ಬಳಸಿ ಬಿಸಾಡುವುದು ಪ್ರಕೃತಿಗೆ ವಿರೋಧಿ ಕ್ರಮ ಎಂದು ಪ್ರತಿಭಟನಾಕಾರರು ದೂರಿದರು.

ಧ್ವಜಾರೋಹಣದಲ್ಲಿ ಮಕ್ಕಳು ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡುತ್ತಿದ್ದು, ಧ್ವಜಾರೋಹಣ ನಂತರ ಅವುಗಳನ್ನು ರಸ್ತೆಯಲ್ಲಿ ಚರಂಡಿಯಲ್ಲಿ ಬಿಸಾಡುತ್ತಾರೆ. ಇದರಿಂದ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗುತ್ತಿದೆ. ಇದನ್ನು ತಡೆಯಲು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿ ನ್ಯಾಯಾಲಯ ಅಪಮಾನ ತಡೆಗೆ ಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ತಯಾರಿಕೆ ನಿಷೇಧಿಸಿ ಆದೇಶ ನೀಡಿದೆ. ಆದರೆ ಇವತ್ತಿಗೂ ಪ್ಲಾಸ್ಟಿಕ್ ಧ್ವಜ ತಯಾರಿಕೆ ಮತ್ತು ಮಾರಾಟ ಮುಂದುವರಿದಿದೆ. ಈ ಕೂಡಲೇ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ತಯಾರಿಕೆ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net