

ಸಿಂಧನೂರು: ನಗರ ಹೊರವಲಯದ ರಾಯಚೂರು ಹೆದ್ದಾರಿ ಮಾರ್ಗ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ಕಳೆದ ಜ.22ರಂದು ಇದೇ ರಸ್ತೆಯಲ್ಲಿ ಮಂತ್ರಾಲಯ ವಿದ್ಯಾಪೀಠದ ವಿದ್ಯಾರ್ಥಿಗಳು ಹಂಪಿಗೆ ಹೊರಟಿದ್ದ ಕ್ರೂಷರ್ ಅಪಘಾತವಾಗಿ ನಾಲ್ವರು ಸಾವಿಗೀಡಾಗಿದ್ದರು. ಈ ಘಟನೆ ನಂತರ ಎಚ್ಚೆತ್ತ ಪಿಡಬ್ಲುೃಡಿ ಅಧಿಕಾರಿಗಳು ಹೆದ್ದಾರಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಹಂಪಿಯಲ್ಲಿ ನಡೆಯುವ ಶ್ರೀ ನರಹರಿ ತೀರ್ಥರ ಆರಾಧನೆ ಮಹೋತ್ಸವಕ್ಕೆ ಮಂತ್ರಾಲಯದಿಂದ ವಿದ್ಯಾರ್ಥಿಗಳನ್ನು ಹೊತ್ತು ಸಾಗಿದ್ದ ಕ್ರೂಷರ್ ವಾಹನ ಒಮ್ಮಿಂದಲೇ ಆಕ್ಸೆಲ್ ತುಂಡಾಗಿ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಮೃತಪಟ್ಟಿದ್ದರು. ಇದಕ್ಕೆ ಹದೆಗೆಟ್ಟ ರಸ್ತೆಯೇ ಕಾರಣವೆಂದು ದೂರಲಾಗಿತ್ತು.
ರಸ್ತೆ ಹದೆಗೆಟ್ಟ ಬಗ್ಗೆ ಜ.23ರಂದು ವಿಜಯವಾಣಿ ‘ಹದೆಗೆಟ್ಟ ಹೆದ್ದಾರಿ ಸಾವಿಗೆ ರಹದಾರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈಗ ಪಿಡಬ್ಲುೃಡಿ ಅಧಿಕಾರಿಗಳು ಡಾಂಬರ್ ಹಾಕುವ ಕಾರ್ಯ ಕೈಗೊಂಡಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.