ಜಿಲ್ಲೆಯಲ್ಲಿರುವ ರಸ್ತೆಗಳನ್ನು ಮೊದಲು ಸರಿಪಡಿಸಿ: ಎಂ.ವಿರೂಪಾಕ್ಷಿ

oplus_2
oplus_2
Published on

ರಾಯಚೂರು: ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳಿಂದ ಅಪಘಾತಗಳು ಹೆಚ್ಚುತ್ತಿದ್ದು, ರಸ್ತೆಗಳನ್ನು ದುರಸ್ತಿಗೊಳಿಸುವುದನ್ನು ಬಿಟ್ಟು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ನಿಯಮ ಜಾರಿಗೆ ತಂದಿರುವುದು ಸರಿಯಾದ ನಡೆಯಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಹೆಲ್ಮೆಟ್ ಧರಿಸದ ವಾಹನ ಸವಾರರಿಂದ ದಂಡ ವಸೂಲಿ ಮಾಡುತ್ತಿರುವ ಪೊಲೀಸರು. ಮೊದಲು ಜಿಲ್ಲೆಯಲ್ಲಿರುವ ರಸ್ತೆಗಳನ್ನು ಸರಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು. ದಂಡ ಕಟ್ಟಲು ದ್ವಿಚಕ್ರ ವಾಹನ ಸವಾರರಿಗೆ ತುಂಬಾ ಕಷ್ಟವಾಗುತ್ತಿದ್ದು, ಹೆಲ್ಮೆಟ್ ಧರಿಸಲು ಇನ್ನೂ ಕೆಲವು ದಿನಗಳವರೆಗೆ ಕಾಲಾವಕಾಶ ನೀಡಬೇಕಿತ್ತು ಎಂದರು.

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ದಂಡ ವಸೂಲಿ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದ್ದು, ಇಸ್ಪಿಟ್ ದಂಧೆ, ಅಕ್ರಮ ಮರಳು ಸಾಗಾಣಿಕೆ, ಜೂಜಾಟ ಪ್ರಕರಣಗಳನ್ನು ಬೇಧಿಸುವ ಕೆಲಸ ಕಡಿಮೆಯಾಗಿ ಹೆಲ್ಮೆಟ್ ಕಡ್ಡಾಯದ ಹೆಸರಿನಲ್ಲಿ ವಸೂಲಿಗೆ ನಿಂತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣಕ್ಕಾಗಿ ಹೆಲ್ಮೆಟ್ ಧರಿಸುವುದು ಸೂಕ್ತವಲ್ಲ. ಹೆಲ್ಮೆಟ್ ಧರಿಸುವುದರಿಂದ ತಲೆಯಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಶಿವಶಂಕರ, ತಿಮ್ಮಾರೆಡ್ಡಿ, ರಾಮಕೃಷ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net