ಸಮಾಜ ಎಚ್ಚರಿಸುವಲ್ಲಿ ದಾಸರ ಪಾತ್ರ ದೊಡ್ಡದು

30-03-shiva-5
Published on

ರಾಯಚೂರು: ಹರಿದಾಸರು ಭಕ್ತಿ ಸಾಹಿತ್ಯ ರಚನೆ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಉಪನ್ಯಾಸಕಿ ಡಾ.ರಾಜಶ್ರೀ ಕಲ್ಲೂರಕರ್ ಹೇಳಿದರು.

ಸ್ಥಳೀಯ ಎಚ್‌ಸಿಎಂಎಸ್‌ಕೆ ಶಿಕ್ಷಣ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಸಾಹಿತ್ಯ ರಚನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಅವರ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದರು.

ವಚನ ಸಾಹಿತ್ಯದ ನಂತರದಲ್ಲಿ ಬಂದ ಹರಿದಾಸ ಸಾಹಿತ್ಯ ಪುರಾಣ, ವೇದ, ಉಪನಿಷತ್ತಿನ ಹಿತವಚನಗಳನ್ನು ಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಿವೆ. ಹರಿದಾಸರು ಕಡಿಮೆ ವಿದ್ಯಾಭ್ಯಾಸ ಮಾಡಿದ್ದರೂ ಭಕ್ತಿ ಸಾಹಿತ್ಯದ ಮೂಲಕ ಜ್ಞಾನ ಪಸರಿಸುವ, ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮ, ತಿಮ್ಮಮ್ಮ, ಹರಪನಹಳ್ಳಿ ಭೀಮವ್ವ, ಗಲಗಲಿ ಅವ್ವ, ರಮಾಬಾಯಿಯಂತಹ ಹಲವು ಮಹಿಳೆಯರು ದಾಸ ಸಾಹಿತ್ಯ ರಚಿಸಿದವರಲ್ಲಿ ಪ್ರಮುಖರಾಗಿದ್ದಾರೆ ಎಂದರು.

ಮಹಿಳಾ ಹರಿದಾಸ ಸಾಹಿತ್ಯ ಕುರಿತು ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಸಮಾಜಮುಖಿಯಾಗಿ ಕೆಲಸ ಮಾಡಲು ಹೆಚ್ಚಿನ ಅವಕಾಶಗಳು ಇಲ್ಲದಿದ್ದರೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ಡಾ.ರಾಜಶ್ರೀ ಕಲ್ಲೂರಕರ್ ಹೇಳಿದರು.

ಪತ್ರಕರ್ತ ಬಿ.ವೆಂಕಟಸಿಂಗ್ ಮಾತನಾಡಿ, ದಾಸ ಸಾಹಿತ್ಯ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ತಿಕ ವಿಷಯಕ್ಕೆ ಮಾತ್ರ ಸಿಮೀತವಾಗದೆ ಕಲೆ, ಸಂಸ್ಕೃತಿ ಮುಂತಾದ ವಿಷಯಗಳಲ್ಲೂ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ವಚನ ಮತ್ತು ದಾಸ ಸಾಹಿತ್ಯ ಚಳವಳಿಗಳು ಜಗತ್ತಿನಲ್ಲಿ ನಡೆದ ಶ್ರೇಷ್ಠ ಚಳವಳಿಗಳಾಗಿವೆ. ವಚನ ಸಾಹಿತ್ಯದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿರುವುದು ಕಂಡು ಬರುತ್ತದೆ. ಆದರೆ ದಾಸ ಸಾಹಿತ್ಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಕುರಿತು ಸಂಶೋಧನೆ ನಡೆಯಬೇಕು ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶರಣಭೂಪಾಲ ನಾಡಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಪ್ರಾಚಾರ್ಯ ಮಂಜುನಾಥ ಪಾಟೀಲ್, ದತ್ತಿ ದಾನಿ ಶ್ರೀಲಕ್ಷ್ಮೀ, ಪತ್ರಕರ್ತ ಖಾನ್‌ಸಾಬ್ ಮೊಮಿನ್, ಕಸಾಪ ಪದಾಧಿಕಾರಿಗಳಾದ ರೇಖಾ ಬಡಿಗೇರ, ದೇವೇಂದ್ರಮ್ಮ, ವಿಜಯರಾಜೇಂದ್ರ, ಉಪನ್ಯಾಸಕರಾದ ಹೇಮರೆಡ್ಡಿ, ಚಂದ್ರಶೇಖರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net