

ರಾಯಚೂರು: ಹಂಪಿ ಪರಿಸರದಲ್ಲಿರುವ ಶ್ರೀನರಹರಿ ತೀರ್ಥರ ಆರಾಧನೆ ಮತ್ತು ಪೂಜೆಗೆ ಸಂಬಂಧಿಸಿ ಹೊಸಪೇಟೆಯ ಕಿರಿಯ ಶ್ರೇಣಿ ನ್ಯಾಯಾಲಯವು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಹೇರಿದ್ದ ಪ್ರತಿಬಂಧಕಾಜ್ಞೆಯನ್ನು ಧಾರವಾಡದ ಹೈಕೋರ್ಟ ಪೀಠವು ಗುರುವಾರ ರದ್ದುಗೊಳಿಸಿದೆ ಎಂದು ತಿಳಿಸಿರುವ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು, ಇದು ಶ್ರೀಮಠದ ಸುದೀರ್ಘ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಶ್ರೀಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀನರಹರಿ ತೀರ್ಥರ ಆರಾಧನೆ ಹಾಗೂ ಪೂಜಾ ಕೈಂಕರ್ಯಕ್ಕೆ ಉತ್ತರಾದಿಮಠದವರು ಆಕ್ಷೇಪಣೆ ಸಲ್ಲಿಸಿ ಹೊಸಪೇಟೆಯ ಕಿರಿಯ ಶ್ರೇಣಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದರು. ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ರಾಯರ ಮಠವು ಧಾರವಾಡದ ಉಚ್ಚ ನ್ಯಾಯಾಲಯಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿತ್ತು. ಈ ಬಗೆ ನ್ಯಾಯಾಲಯವು ಸಂಪೂರ್ಣ ವಿಚಾರಣೆ ನಡೆಸಿ ಗುರುವಾರ ತೀರ್ಪು ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.
ಧಾರವಾಡದ ಪೀಠದ ತೀರ್ಪಿನ ಪ್ರಕಾರ ಹೊಸಪೇಟೆಯ ನ್ಯಾಯಾಲಯವು ವಿಧಿಸಿದ್ದ ಆದೇಶವು ತಪ್ಪು ಗ್ರಹಿಕೆಯಿಂದಾದ ನಿರ್ಧಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಶ್ರೀನರಹರಿತೀರ್ಥರ ಆರಾಧನೆ ಹಾಗೂ ಪೂಜೆ ಸಲ್ಲಿಕೆಗೆ ಹೇರಲಾಗಿದ್ದ ಪ್ರತಿಬಂಧಕಾಜ್ಞೆಯನ್ನು ತೆರವುಗೊಳಿಸಿ ತೀರ್ಪು ಪ್ರಕಟಿಸಿದೆ. ಇದರಿಂದ ತಮಗೆ ಹಾಗೂ ರಾಯರ ಮಠದ ಎಲ್ಲ ಅನುಯಾಯಿಗಳಿಗೆ ಸಂತಸ ಉಂಟಾಗಿದೆ ಎಂದು ಹೇಳಿಕೆಯಲ್ಲಿ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.