ಆಲಿಕಲ್ಲು ಮಳೆ ಹಾನಿ ವರದಿ ಸಲ್ಲಿಸಿ ; ಅಧಿಕಾರಿಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ಸೂಚನೆ

13042020 Raichur DCM Laxman Savadi Meeting
Published on

ಮಧ್ಯಮ ವರ್ಗದ ಜನರಿಗೆ ಆಹಾರಧಾನ್ಯ ತಲುಪಿಸಿ

ರಾಯಚೂರು: ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ವರದಿ ನೀಡಬೇಕು. ತಕ್ಷಣಕ್ಕೆ ಪ್ರಾಥಮಿಕ ವರದಿ ನೀಡಿ ನಂತರದಲ್ಲಿ ಸಮಗ್ರ ವರದಿ ಸಲ್ಲಿಸಿದರೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆಗೆ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಕರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆ ನಡೆಸಿ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಜನರಿಗೆ ಪಡಿತರ ವಿತರಣೆ ಮಾಡಬೇಕು. ಪಡಿತರ ಚೀಟಿದಾರರಿಗೆ ಕಡಿಮೆ ಆಹಾರಧಾನ್ಯ ವಿತರಿಸುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡುವಂತೆ ಸೂಚಿಸಿದರು.

ಲಾಕ್‌ಡೌನ್‌ನಿಂದಾಗಿ ಶ್ರೀಮಂತರಿಗೆ ಸಮಸ್ಯೆಯಾಗಿಲ್ಲ. ಬಡ ಜನರಿಗೆ ಸರ್ಕಾರದ ಯೋಜನೆಗಳ ಪ್ರಯೋಜನೆ ದೊರೆಯುತ್ತಿದೆ. ಆದರೆ, ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಅವರಿಗೆ ಆಹಾರಧಾನ್ಯ ತಲುಪಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ ಮಾತನಾಡಿ, ಕರೊನಾ ಹಿನ್ನೆಲೆ ಒಪೆಕ್ ಆಸ್ಪತ್ರೆಯಲ್ಲಿ 150 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, 30 ಹಾಸಿಗೆಗಳ ಐಸಿಯು ವ್ಯವಸ್ಥೆ ಮಾಡಲಾಗಿದೆ. ಶಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್ ವ್ಯವಸ್ಥೆಗಾಗಿ 5 ಹೋಟೆಲ್‌ಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಶಾಸಕರಾದ ಕೆ.ಶಿವನಗೌಡ ನಾಯಕ, ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ಡಾ.ಶಿವರಾಜ ಪಾಟೀಲ್, ಡಿ.ಎಸ್.ಹೂಲಗೇರಿ, ರಾಜಾ ವೆಂಕಟಪ್ಪ ನಾಯಕ, ಎಂಎಲ್ಸಿಗಳಾದ ಎನ್.ಎಸ್.ಬೋಸರಾಜು, ಬಸವರಾಜ ಪಾಟೀಲ್ ಇಟಗಿ ಇತರರಿದ್ದರು.

ಕನ್ನಡ ಕಲಿತುಕೊಳ್ಳಿ: ಎನ್‌ಐಸಿ ಮುಖ್ಯಸ್ಥ ರವಿಶಂಕರ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲು ಆರಂಭಿಸಿದಾಗ, ನೀವು ಜಿಲ್ಲೆಗೆ ಬಂದು 10 ವರ್ಷಗಳಾದರೂ ಕನ್ನಡ ಕಲಿಯಲು ಸಾಧ್ಯವಾಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಡಿಸಿಎಂ, ಕರ್ನಾಟಕದ ಸಂಬಳ ಪಡೆದು ಇಲ್ಲಿಯೇ ವಾಸವಾಗಿದ್ದು ಕನ್ನಡ ಕಲಿಯದಿದ್ದರೇ ಹೇಗೆ, ಮುಂದಿನ ಸಭೆಯೊಳಗೆ ಕನ್ನಡ ಕಲಿತು ಕನ್ನಡದಲ್ಲಿ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net