ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಿ

MANAVI
ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ಎ.ಕೆ.ಹುಲ್ಲಪ್ಪ, ಅಧ್ಯಕ್ಷ ಎಚ್.ಹನುಮಂತ, ಉಪಾಧ್ಯಕ್ಷೆ ಚಂದ್ರಲೇಖ, ಪದಾಧಿಕಾರಿಗಳಾದ ತಿಪ್ಪಣ್ಣ, ಸೌಮ್ಯಾ, ನಾಗರಾಜ, ಕೆ.ಬಾಲಾಜಿ, ಬಸವರಾಜ, ಗಂಗಾಧರ, ಸೌಮ್ಯಾ ಇದ್ದರು.
Published on

ರಾಯಚೂರು: ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣನೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಯಂ ಶಿಕ್ಷಕರು ಬಂದರೆ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸದೆ ಕರ್ತವ್ಯದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಬೇಕು. ಸರ್ಕಾರ ಶಿಕ್ಷಕರ ನೇಮಕಾತಿ ನಡೆಸುವ ಸಂದರ್ಭದಲ್ಲಿ ಅತಿಥಿ ಶಿಕ್ಷಕರಿಗೆ ಶೇ.5 ಕೃಪಾಂಕ ನೀಡಬೇಕು. ಕಾಯಂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ವಿಲೀನಗೊಳಿಸಬೇಕು.

ಇಲಾಖೆಯಿಂದ ನೀಡುವ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು. ಇಎಲ್, ಸಿಎಲ್ ಸೌಲಭ್ಯ ಹಾಗೂ ಮಹಿಳಾ ಶಿಕ್ಷಕಿಯರಿಗೆ ಹೆರಿಗೆ ರಜೆ ಸೌಲಭ್ಯ ನೀಡಬೇಕು. ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಸೂಕ್ತ ಕಾನೂನು ರಚಿಸಬೇಕು. ದೆಹಲಿ, ಪಂಜಾಬ್, ಹರಿಯಾಣ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲೂ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಎ.ಕೆ.ಹುಲ್ಲಪ್ಪ, ಅಧ್ಯಕ್ಷ ಎಚ್.ಹನುಮಂತ, ಉಪಾಧ್ಯಕ್ಷೆ ಚಂದ್ರಲೇಖ, ಪದಾಧಿಕಾರಿಗಳಾದ ತಿಪ್ಪಣ್ಣ, ಸೌಮ್ಯಾ, ನಾಗರಾಜ, ಕೆ.ಬಾಲಾಜಿ, ಬಸವರಾಜ, ಗಂಗಾಧರ, ಸೌಮ್ಯಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net