

ರಾಯಚೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಕರ್ನಾಟಕ ಪದವಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಮನವಿ ಸಲ್ಲಿಸಿತು. ಕಾಲೇಜುಗಳು ತಡವಾಗಿ ಆರಂಭವಾಗಿರುವುದರಿಂದ ಅತಿಥಿ ಉಪನ್ಯಾಸಕರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಮತ್ತು ಗಂಭೀರ ಕಾಯಿಲೆಗೆ ಬಲಿಯಾದ ಉಪನ್ಯಾಸಕರ ಸಂಖ್ಯೆ 15 ದಾಟಿದೆ. ಕೆಲವರು ಉದ್ಯೋಗ ಖಾತ್ರಿಯಡಿ ಕೂಲಿ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ತರಕಾರಿ ಮಾರಿ ಉಪಜೀವನ ನಡೆಸುತ್ತಿದ್ದಾರೆ. ಸರ್ಕಾರ ಐದು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಿದ್ದರೂ ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ನೋವು ತೋಡಿಕೊಳ್ಳಲಾಗಿದೆ.
ನವೆಂಬರ್‌ನಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿದ್ದು, ಕಳೆದ ವರ್ಷ ಸೇವೆ ಸಲ್ಲಿಸಿದ್ದ ಅತಿಥಿ ಉಪನ್ಯಾಸಕರನ್ನು ಮುಂದುವರಿಸುವಂತೆ ಇಲಾಖೆ ನಿರ್ದೇಶನ ನೀಡಿದೆ. ಆದರೆ, ಆಯುಕ್ತರ ಕಚೇರಿಯಿಂದ ಹೊರಡಿಸಿದ ಸುತ್ತೋಲೆಯಲ್ಲಿ 7,091 ಉಪನ್ಯಾಸಕರನ್ನು ಮಾತ್ರ ಸೇರಿಸಿಕೊಳ್ಳುವ ನಿರ್ದೇಶನವಿದೆ. ಇದರಿಂದ ಉಳಿದ ಉಪನ್ಯಾಸಕರಿಗೆ ಆಘಾತವುಂಟಾಗಿದೆ. ಕೇವಲ ಅರ್ಧದಷ್ಟು ಉಪನ್ಯಾಸಕರ ಸೇವೆಗೆ ಅವಕಾಶ ನೀಡಿದರೆ ತರಗತಿಗಳು ಸರಿಯಾಗಿ ನಡೆಯುವುದಿಲ್ಲ. ಹಿಂದಿನ ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರನ್ನೇ ಸೇವೆಯನ್ನು ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಿತಿ ಪದಾಧಿಕಾರಿಗಳಾದ ಚನ್ನಬಸವ ಜಾನೇಕಲ್, ಡಾ.ಹನಮಂತ ಕುರ್ಡಿ, ಡಾ.ಶ್ರೀನಿವಾಸ ಹೊಸಪೇಟೆ, ಬಸವರಾಜ, ರಾಮಚಂದ್ರ, ಡಾ.ಮರಿಲಿಂಗಪ್ಪ, ರಾಮಣ್ಣ ಬೇರ‌್ಗಿ, ಕೃಷ್ಣ ಯಕ್ಲಾಸಪುರ ಇತರರು ಇದ್ದರು.