ಅನುದಾನ ಸರ್ಕಾರಕ್ಕೆ ಹಿಂದಿರುಗದಂತೆ ಎಚ್ಚರಿಕೆ ವಹಿಸಿ; ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಸೂಚನೆ

02032022 raichur zp meeting
Published on

ಪ್ರಗತಿ ಪರಿಶೀಲನಾ ಸಭೆ

ರಾಯಚೂರು: ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಳಸಿಕೊಳ್ಳಬೇಕು. ಈ ಮೂಲಕ ಅನುದಾನ ಹಿಂದಿರುಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಸೂಚಿಸಿದರು.

ಸ್ಥಳೀಯ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಕಷ್ಟು ಇಲಾಖೆಗಳು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಆರ್‌ಡಿಎಫ್ ಅನುದಾನದಡಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ನಿರ್ಮಾಣದಲ್ಲಿ ಶೇ.75 ಪ್ರಗತಿಯಾಗಿದ್ದು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಬಿಸಿಯೂಟ ಯೋಜನೆಗೆ ಮಂಜೂರಾದ 93 ಕೋಟಿ ರೂ.ಗಳಲ್ಲಿ 61 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 20 ಕೋಟಿ ರೂ. ಬಳಕೆ ಮಾಡಿಲ್ಲ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲಿಯೇ ಹೆರಿಗೆ ನಡೆಯುತ್ತಿದ್ದು, ಅಂತಹ ಪ್ರಕರಣಗಳನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕು. ಅದರಲ್ಲೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದ ತಾಂಡಾಗಳಲ್ಲಿ ಇಂತಹ ಪ್ರಕರಣಗಳಿದ್ದು, ಅಗತ್ಯ ಕ್ರಮಕೈಗೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಅಧಿಕಾರಿಗಳಿಗೆ ಜಿ.ಕುಮಾರ ನಾಯಕ ಸೂಚಿಸಿದರು.

ಡಿಎಚ್‌ಒ ರಾಮಕೃಷ್ಣ ಮಾತನಾಡಿ, ಆರೋಗ್ಯ ಇಲಾಖೆ ಕಟ್ಟಡ ಹಾಗೂ ಲಿಫ್ಟ್ ಅಳವಡಿಸಲು 30 ಲಕ್ಷ ರೂ. ಬಿಡುಗಡೆಯಾಗಿದ್ದು, ಕ್ಯಾಷುಟೆಕ್‌ಗೆ ಕಾಮಗಾರಿ ವಹಿಸಲಾಗಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಶೇ.98 ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಶೇ.2 ಮನೆಗಳಲ್ಲಿ ನಡೆಯುತ್ತಿವೆ. ಅಕ್ಕಪಕ್ಕದ ರಾಜ್ಯ ಮತ್ತು ಜಿಲ್ಲೆಗಳಿಂದ ಜನರು ಜಿಲ್ಲೆಗೆ ಹೆರಿಗೆಗೆ ಆಗಮಿಸುತ್ತಿದ್ದು, ಗುರಿ ಮೀರಿ ಬಿಸಿಜಿ ಲಸಿಕೆ ಹಾಕಲಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್, ಜಿಪಂ ಸಿಇಒ ನೂರ್ ಜಹರಾ ಖಾನಂ, ಎಸ್ಪಿ ಬಿ.ನಿಖಿಲ್ ಇದ್ದರು.

ಕಾಮಗಾರಿ ನಿರ್ವಹಿಸದ ನಿರ್ಮಿತಿ ಕೇಂದ್ರ
ಅಂಗನವಾಡಿ ಕೇಂದ್ರಗಳಿಗೆ ಕುಡಿವ ನೀರು, ವಿದ್ಯುತ್, ಶೌಚಗೃಹ ಸೌಲಭ್ಯ ಒದಗಿಸಿರುವ ಕುರಿತು ವರದಿ ನೀಡುವಂತೆ ಹೈಕೋರ್ಟ್ ಅದೇಶಿಸಿದೆ. ಆದರೆ, ಕಾಮಗಾರಿ ವಹಿಸಿಕೊಂಡಿರುವ ನಿರ್ಮಿತಿ ಕೇಂದ್ರ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಜಿಪಂ ಸಿಇಒ ನೂರ್ ಜಹರಾ ಖಾನಂ ತಿಳಿಸಿದರು. ಕಾಮಗಾರಿ ನಿರ್ವಹಿಸಿದ ಸಂಸ್ಥೆಯನ್ನು ಬದಲಾಯಿಸುವಂತೆ ಜಿ.ಕುಮಾರ ನಾಯಕ ಸೂಚಿಸಿದರು. ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಶರಣಬಸಪ್ಪ ಪಟ್ಟೇದ ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಿರ್ವಹಿಸಲು ಸಾಧ್ಯವಾಗಿಲ್ಲ. ಅನುದಾನ ಹಿಂದಿರುಗಿಸುವುದಾಗಿ ತಿಳಿಸಿದರು. ಕೊನೇ ಕ್ಷಣದಲ್ಲಿ ಅನುದಾನ ಹಿಂದಿರುಗಿಸುವುದಾಗಿ ಹೇಳುವುದು ಸರಿಯಲ್ಲ. ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಕಾಮಗಾರಿ ಏಕೆ ವಹಿಸಿಕೊಳ್ಳಬೇಕು ಎಂದು ಕುಮಾರ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net