ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ; ಶೇ.56.65 ವೋಟಿಂಗ್, ಜಿಲ್ಲಾದ್ಯಂತ ಶಾಂತಿಯುತ ಹಕ್ಕು ಚಲಾವಣೆ

22122020 Raichur GP Election3
Published on

ಕೆಲ ಅಭ್ಯರ್ಥಿಗಳ ಚಿಹ್ನೆ ಬದಲು | ಪೊಲೀಸರ ಮೇಲೆ ಕಲ್ಲು ತೂರಾಟ


ರಾಯಚೂರು: ಜಿಲ್ಲೆಯಲ್ಲಿ ಮೊದಲ ಹಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಮಂಗಳವಾರ ಜರುಗಿದ ಮತದಾನ ಒಂದೆರೆಡು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಶಾಂತಿಯುತವಾಗಿ ಜರುಗಿದ್ದು, ಜಿಲ್ಲೆಯಲ್ಲಿ ಶೇ.56.65 ಮತದಾನವಾಗಿದೆ.

ಜಿಲ್ಲೆಯ 91 ಗ್ರಾಪಂಗಳ 1,793 ಸ್ಥಾನಗಳಿಗೆ 893 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ರಾಯಚೂರು ಉಪ ವಿಭಾಗದ ರಾಯಚೂರು, ದೇವದುರ್ಗ, ಮಾನ್ವಿ ಮತ್ತು ಸಿರವಾರ ತಾಲೂಕಿನ ಗ್ರಾಪಂಗಳಿಗೆ ಮತದಾನ ನಡೆದಿತು. ಮತಗಟ್ಟೆಗಳಲ್ಲಿ ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳಗೆ ಬಿಡಲಾಯಿತು.

ಸಿರವಾರ ತಾಲೂಕಿನ ಗಣದಿನ್ನಿ ಗ್ರಾಪಂ ವ್ಯಾಪ್ತಿಯ ಕೆ.ತುಪ್ಪದೂರು ಗ್ರಾಮದಲ್ಲಿ ಸಿದ್ದಮ್ಮ ಎಂಬುವವರಿಗೆ ಗಡಿಗೆ ಚಿಹ್ನೆ ನೀಡಲಾಗಿತ್ತು. ಮತ ಚೀಟಿಯಲ್ಲಿ ಆಟೋ ಚಿಹ್ನೆ ಮುದ್ರಣವಾಗಿತ್ತು. ದೇವಮ್ಮಗೆ ನೀಡಿದ್ದ ಟ್ರಾೃಕ್ಟರ್ ಚಿಹ್ನೆ ಬದಲು ಮತ ಚೀಟಿಯಲ್ಲಿ ಗ್ಯಾಸ್ ಸ್ಟೌ ಚಿಹ್ನೆ ಮುದ್ರಿತವಾಗಿದ್ದರಿಂದ ಮತದಾನ ಆರಂಭವಾಗಲಿಲ್ಲ. ಅಧಿಕಾರಿಗಳು ಅಭ್ಯರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದಾಗ ಇಂದೇ ಮತದಾನ ನಡೆಸುವಂತೆ ಮನವಿ ಮಾಡಿದ್ದರಿಂದ ಹೊಸದಾಗಿ ಮತ ಚೀಟಿಗಳನ್ನು ಮುದ್ರಿಸಿಕೊಂಡು ಬಂದು 11 ಗಂಟೆಗೆ ಮತದಾನ ಆರಂಭಿಸಲಾಯಿತು. ವಿಳಂಬವಾಗಿರುವ ಕಾರಣ ಮತಗಟ್ಟೆಯಲ್ಲಿ ರಾತ್ರಿ 7ರವರೆಗೆ ಮತದಾನಕ್ಕೆ ಅವಕಾಶ ನೀಡಲಾಯಿತು.

ದೇವದುರ್ಗ ತಾಲೂಕಿನ ಜುಟಮರಡಿ ಗ್ರಾಮದಲ್ಲಿ ಮತಗಟ್ಟೆ ಆವರಣಕ್ಕೆ ಬಂದ ವ್ಯಕ್ತಿ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಪಿಎಸ್‌ಐ ಹಾಗೂ ಪೇದೆಗೆ ಗಾಯಗಳಾಗಿದ್ದು, ಜೀಪ್‌ನ ಗ್ಲಾಸ್ ಒಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಸ್ಥಿತಿ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ದುಡಿಯಲು ಬೆಂಗಳೂರು, ಪುನಾ, ಮುಂಬೈಗೆ ಗುಳೆ ಹೋಗಿದ್ದ ಜನರನ್ನು ಖಾಸಗಿ ಬಸ್‌ಗಳ ಮೂಲಕ ಗ್ರಾಮಗಳಿಗೆ ಕರೆ ತರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net