

ಮತಗಟ್ಟೆಗಳತ್ತ ನಿಯೋಜಿತರ ಪಯಣ | 91 ಗ್ರಾಪಂಗಳ 1,793 ಸ್ಥಾನಗಳಿಗೆ ಚುನಾವಣೆ
ರಾಯಚೂರು: ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕ್ಕೆ 2,072 ಪಿಆರ್‌ಒ ಹಾಗೂ ಎಪಿಆರ್‌ಒ ಸೇರಿ ಒಟ್ಟು 4,144 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಸಿಬ್ಬಂದಿ ನಗರದ ಎಲ್‌ವಿಡಿ ಕಾಲೇಜಿನಲ್ಲಿನ ಮಸ್ಟರಿಂಗ್ ಕೇಂದ್ರದಿಂದ ಚುನಾವಣೆ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ಮತಗಟ್ಟೆಗಳತ್ತ ತೆರಳಿದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 91 ಗ್ರಾಪಂಗಳ 1,793 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾನಕ್ಕಾಗಿ 663 ಮತಗಟ್ಟೆ ಹಾಗೂ 230 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 873 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 5,91,027 ಮತದಾರರು ಮತ ಚಲಾಯಿಸಲಿದ್ದಾರೆ.
ಮತಗಟ್ಟೆಗಳಲ್ಲಿ 77 ಅತಿ ಸೂಕ್ಷ್ಮ, 157 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಇತರ ಮತಗಟ್ಟೆಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. 40 ಸೆಕ್ಟರ್ ಮ್ಯಾಜಿಸ್ಟ್ರೇಟರ್ ನೇಮಕ ಮಾಡಲಾಗಿದ್ದು, 12 ಎಂಸಿಸಿ ತಂಡ ರಚನೆ ಮಾಡಲಾಗಿದೆ.
ಮತಗಟ್ಟೆಗಳಿಗೆ ಸಿಬ್ಬಂದಿ ತೆರಳಲು 37 ಸಾರಿಗೆ ಸಂಸ್ಥೆ ಬಸ್, 25 ಶಾಲಾ ವಾಹನ, 20 ಕ್ರೂಸರ್ ಸೇರಿ ಒಟ್ಟು 286 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮತದಾನ ಸಾಮಗ್ರಿ ಜತೆಗೆ ಪ್ರತಿಯೊಂದು ಮತಗಟ್ಟೆಗೂ ಥರ್ಮಲ್ ಸ್ಕಾೃನರ್, ಸ್ಯಾನಿಟೈಸರ್, ಗ್ಲೌಸ್‌ಗಳನ್ನು ನೀಡಲಾಗುತ್ತಿದೆ.
ಮತದಾರರು ಮತ ಚಲಾಯಿಸಲು ಬಂದಾಗ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಹಾಗೂ ಸೋಂಕು ದೃಢಪಟ್ಟಿರುವವರಿಗೆ ಮತದಾನದ ಕೊನೆಯ ಒಂದು ಗಂಟೆ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ಭದ್ರತೆಗಾಗಿ 1,200 ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ, ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಕೋವಿಡ್ ನಿಯಮಾವಳಿಗೆ ಬೆಲೆಯಿಲ್ಲ : ಗ್ರಾಪಂ ಚುನಾವಣೆಗಾಗಿ ನಗರದ ಎಲ್‌ವಿಡಿ ಕಾಲೇಜಿನಲ್ಲಿ ನಡೆಯುತ್ತಿರುವ ಮಸ್ಟರಿಂಗ್ ಕಾರ್ಯದ ಸಂದರ್ಭದಲ್ಲಿ ಸಿಬ್ಬಂದಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಿಲ್ಲ. ಸಾವಿರಾರು ಸಿಬ್ಬಂದಿ ಪರಸ್ಪರ ಅಂತರ ಕಾಪಾಡಿಕೊಳ್ಳದೆ ಗುಂಪುಗೂಡಿ ಕುಳಿತುಕೊಳ್ಳುವುದರ ಜತೆಗೆ ಬಹುತೇಕರು ಮಾಸ್ಕ್ ಧರಿಸದಿರುವುದು ಕಂಡು ಬರುತ್ತಿತ್ತು. ಕಾಲೇಜು ಮುಖ್ಯದ್ವಾರ ಮತ್ತು ಕೆಲವೆಡೆ ಥರ್ಮಲ್ ಸ್ಕ್ರೀನಿಂಗ್ ನಡೆಸಿದರೂ ಹೆಚ್ಚಿನ ಜನ ಪರೀಕ್ಷೆಗೆ ಒಳಗಾಗಲಿಲ್ಲ.
ಅಧಿಕಾರಿಗಳಿಗೆ ದುಂಬಾಲು: ಚುನಾವಣೆ ಕಾರ್ಯದಿಂದ ವಿನಾಯಿತಿ ನೀಡುವಂತೆ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಬಂದ ಶಿಕ್ಷಕಿಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಹಿರಿಯ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರು. ಶಿಕ್ಷಕಿಯೊಬ್ಬರು ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಆಗಮಿಸಿ ಚುನಾವಣೆ ಕಾರ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇನ್ನೂ ಕೆಲವರು ವೈದ್ಯರು ಮತ್ತು ಆಸ್ಪತ್ರೆಯ ದಾಖಲೆಗಳನ್ನು ಹಿಡಿದುಕೊಂಡು ವಿನಾಯಿತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿರುವುದು ಕಂಡು ಬರುತ್ತಿತ್ತು.