

ರಾಯಚೂರು: ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡದೇ ರಾಜ್ಯದಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಖಂಡನೀಯ ಎಂದು ಒಳಮೀಸಲಾತಿ ಐಕ್ಯ ಹೋರಾಟ ಸಮಿತಿಯ ಸಂಚಾಲಕ ಎಂ.ವಿರೂಪಾಕ್ಷಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಒಳಮೀಸಲಾತಿ ಜಾರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಇಲಾಖೆಯ ತಜ್ಞರೊಂದಿಗೆ ಚರ್ಚಿಸುವುದಾಗಿ ಹೇಳಿ, ಇದೀಗ ಮೀಸಲಾತಿ ಜಾರಿಗೊಳಿಸದೇ ತರಾತುರಿಯಲ್ಲಿ 34,663 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದರಿಂದ ಅಸ್ಪರ್ಶ್ಯ ಜನಾಂಗಕ್ಕೆ ಮಹಾ ದ್ರೋಹವಾಗುತ್ತಿದೆ ಎಂದು ಆಕ್ರೋಶಗೊಂಡರು.
ಕಳೆದ 20 ವರ್ಷದ ನಂತರ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ ಆದರೆ ಒಳಮೀಸಲಾತಿ ಜಾರಿ ಮಾಡದೇ ಇರುವುದರಿಂದ ಹುದ್ದೆಗಳ ಭರ್ತಿಯಲ್ಲಿ ಮೀಸಲಾತಿ ಸಿಗದೇ ಅಸ್ಪರ್ಶ್ಯ ಸಮುದಾಯದ ಜನರು ವಂಚಿತರಾಗುತ್ತಾರೆ. ಕೂಡಲೇ ಸರ್ಕಾರ ಹುದ್ದೆಗಳ ನೇಮಕಾತಿಗೂ ಮೊದಲು ಒಳಮೀಸಲಾತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಜಾರಿಗಾಗಿ ಅ.16ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಸಿಎಂ ಸಿದ್ದರಾಮಯ್ಯ ದುರಂತ ನಾಯಕನಾಗಿದ್ದು, ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಇದೀಗ ಮತ್ತೆ ನಿರ್ಲಕ್ಷೃತನವನ್ನು ತೋರಿಸುತ್ತಿದ್ದಾರೆ. ತರಾತುರಿಯಲ್ಲಿ ಹುದ್ದೆಗಳ ಭರ್ತಿ ಮಾಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ನರಸಪ್ಪ ದಂಡೋರ, ಪಿ.ಯಲ್ಲಪ್ಪ, ರವೀಂದ್ರ ಜಲ್ದಾರ್, ಶಂಶಾಲಂ, ನರಸಿಂಹ, ತಿಮ್ಮಪ್ಪ, ಸುಭಾಷ್, ಭೀಮಣ್ಣ, ರಾಘವೇಂದ್ರ ಬೋರೆಡ್ಡಿ ಸೇರಿದಂತೆ ಇತರರಿದ್ದರು.