

ರಾಯಚೂರು: ಜಿಲ್ಲಾದ್ಯಂತ ಕಾತರದಿಂದ ನಿರೀಕ್ಷಿಸುತ್ತಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ ಇಂದು ಗೊಂದಲದ ಕೇಂದ್ರ ಬಿಂದು ಆಗಿದೆ. ಚುನಾವಣಾಧಿಕಾರಿ ಭೀಮಣ್ಣ ಎಂಬುವವರು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದೇ, ಸಂಪರ್ಕಕ್ಕೂ ಸಿಗದೇ ಪರಾರಿಯಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ 3 ಜನರು ನ.29ರಂದು ತಮ್ಮ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದು, ಅಂಜನೇಯ್ಯ, ಮಹಾಂತೇಶ ಬಿರಾದಾರ, ಮತ್ತು ಕೃಷ್ಣ ಎಂಬುವವರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.
ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೂ ತಲಾ 3 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಸಂಜೆ 5.30ರೊಳಗೆ ಪ್ರಕಟಿಸಬೇಕಾಗಿತ್ತು. ಆದರೆ, ಈ ಬಾರಿಯ ಚುನಾವಣಾ ಪ್ರಕ್ರಿಯೆ ಹದಗೆಟ್ಟಿದ್ದು, ಚುನಾವಣಾಧಿಕಾರಿ ಭೀಮಣ್ಣ ಫೋನ್ ಸ್ವಿಚ್ ಆಫ್ ಮಾಡಿಕೊಮಡಿದ್ದು, ಅವರನ್ನು ಸಂಪರ್ಕಿಸಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಡಿ.4ರಂದು ನಡೆಯಲಿದ್ದು, ಮತದಾನ ಮುಕ್ತಾಯವಾದ ನಂತರ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ. ಮತೆಣಿಕೆ ನಂತರ ಫಲಿತಾಂಶ ಹೊರ ಬೀಳಲಿದೆ.
ನೌಕರರ ಸಂಘದ ಸದಸ್ಯರು ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಿಮ ಪಟ್ಟಿಯ ಪ್ರಕಟಣೆಗೆ ಕಾಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಕಾನೂನಾತ್ಮಕವಾಗಿ ಜರುಗಬೇಕು ಆದರೆ ಚುನಾವಣಾಧಿಕಾರಿಗಳ ಈ ನಡೆಯಿಂದ ಚುನಾವಣೆಯ ಪಾರದರ್ಶಕತೆ ತೀವ್ರ ಕುಸಿದುಹೋಗಿದೆ.
ನೌಕರರ ಸಂಘದ ಚುನಾವಣೆ, ಸಂಘದಿಂದ ನಡೆಯಲ್ಪಡುತ್ತದೆ ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿರುವುದಿಲ್ಲ ಆದಾಗ್ಯೂ ಚುನಾವಣಾಧಿಕಾರಿಗಳು ಸಂಪರ್ಕಕ್ಕೆ ಸಿಗದಿರುವ ಬಗ್ಗೆ ಪರಿಶೀಲಿಸಲಾಗುವುದು. | ಕೆ.ನಿತೀಶ, ಡಿಸಿ ರಾಯಚೂರು ಕಣದಲ್ಲಿರುವ ಕೆಲವು ಅಭ್ಯರ್ಥಿಗಳು ಸೋಲಿನ ಭಯದಿಂದ ಚುನಾವಣಾಧಿಕಾರಿಗಳನ್ನು ಬಳಸಿಕೊಂಡು ಇತರೆ ಅಭ್ಯರ್ಥಿಗಳನ್ನು ಹಿಂದೆ ಸರಿಸಿ ಪಟ್ಟಿ ಲಗತ್ತಿಸಲು ಹುನ್ನಾರ ನಡೆಸಿದ್ದಾರೆ. ಚುನಾವಣಾ ಆರಂಭದಿಂದಲೂ ಇದೇ ಅವಾಂತರ ಮಾಡುತ್ತಿದ್ದು ಕೂಡಲೇ ಚುನಾವಣಾಧಿಕಾರಿಗಳನ್ನು ಬದಲಾವಣೆ ಮಾಡಬೇಕು. | ಸಂತೋಷ ನಂದಿನಿ, ನೂತನ ನಿರ್ದೇಶಕರು, ಕರ್ನಾಟಕ ಸರ್ಕಾರಿ ನೌಕರರ ಸಂಘ, ರಾಯಚೂರು