ಸರ್ಕಾರಗಳಿಂದ ದೇಶದ ಆರ್ಥಿಕತೆಗೆ ವಿಪತ್ತು

120322 Raichur District Conference of AIUTUC Workers
12-03-ಶಿವಾ-4: ರಾಯಚೂರಿನ ಕನ್ನಡ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಏರ್ಪಡಿಸಿದ್ದ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್ ಮಾತನಾಡಿದರು.
Published on

ರಾಯಚೂರು: ಸರ್ಕಾರಗಳು ದೇಶ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದರಿಂದ ದೇಶದ ಆರ್ಥಿಕತೆ ವಿಪತ್ತಿನ ಅಂಚಿಗೆ ಬರುತ್ತಿದೆ. ದೇಶ ವಿರೋಧಿ ನೀತಿಗಳ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್ ಹೇಳಿದರು.

ಸ್ಥಳೀಯ ಕನ್ನಡ ಭವನದಲ್ಲಿ ಮಾ.28, 29ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿರುವ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

ದೇಶದಲ್ಲಿ ಕಾರ್ಪೋರೇಟ್ ಪರವಾದ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದ್ದು, ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕರು ದಿವಾಳಿಯಾಗುತ್ತಿದ್ದಾರೆ. ಉದ್ಯೋಗ ನಾಶ, ಬೆಲೆ ಏರಿಕೆಯಿಂದ ಜನರ ಜೀವನ ಮಟ್ಟ ಕುಸಿಯುತ್ತಿದೆ. ದುಡಿಯುವ ವರ್ಗ ತೀವ್ರ ಸಂಕಷ್ಟ ಗುರಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ಜಂಟಿ ಕಾರ್ಯದರ್ಶಿ ಡಿ.ಎಸ್.ಶರಣಬಸವ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ, ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರದ ಮುಂದಾಗಬೇಕಾಗಿದೆ ಎಂದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ ಮಾತನಾಡಿ, ದೇಶದಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಸಿಬ್ಬಂದಿಗಳಿಗೆ ಶಾಸನಬದ್ಧ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಖಾತ್ರಿಪಡಿಸಲು ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು. ಕಾರ್ಮಿಕ ಮುಖಂಡರಾದ ತಿಮ್ಮಪ್ಪ ಸ್ವಾಮಿ, ಮಹೇಶ ಚೀಕಲಪರ್ವಿ, ವರಲಕ್ಷ್ಮೀ, ಮಹ್ಮದ್ ಯೂನಿಸ್, ಎಚ್.ಪದ್ಮಾ, ಈರಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net