ಸಮಾವೇಶಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಡಿಸಿ ಕೆ.ನಿತೀಶ

IMG_20241002_234011
Published on

ರಾಯಚೂರು: ಕಲಬುರಗಿ ವಿಭಾಗ ಮಟ್ಟದ ಗೋಕಾಕ್ ಚಳುವಳಿಯ ಹಿನ್ನೋಟ ಹಾಗೂ ಮುನ್ನೋಟ ಸಮಾವೇಶವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರು ಶ್ರಮಿಸುವಂತೆ ಡಿಸಿ ಕೆ.ನಿತೀಶ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಗೋಕಾಕ್ ಚಳವಳಿಯ ಹಿನ್ನೋಟ, ಮುನ್ನೋಟ ಸಮಾವೇಶದ ಕುರಿತು ಜಿಲ್ಲೆಯ ಸಂಘ, ಸಂಸ್ಥೆಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ಅ.5ರಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶವನ್ನು ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಯಶಸ್ವಿಗೊಳಿಸಲು ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.
ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕೆ ಗೋಕಾಕ್ ಚಳವಳಿಯ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು.

ಗೋಕಾಕ್ ಚಳವಳಿಯ ಇತಿಹಾಸದ ಕುರಿತು ಚರ್ಚಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ. ಚಳವಳಿಯಲ್ಲಿ ಭಾಗವಹಿಸಿದ ಅನೇಕ ಹಿರಿಯ ಹೋರಾಟಗಾರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಚಳವಳಿಯು ಮುಂದೆ ಸಾಗಬೇಕಾದ ಹಾದಿಗಳ ಬಗ್ಗೆ ಅನೇಕ ಚಿಂತಕರು ಬೆಳಕು ಚೆಲ್ಲಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಡಿಸಿ ಶಿವಾನಂದ ಭಜಂತ್ರಿ, ವಿವಿಧ ಸಂಘ, ಸಂಸ್ಥೆಗಳ ಪ್ರಮುಖರಾದ ಅಶೋಕ ಕುಮಾರ ಜೈನ್, ಬಸವರಾಜ್ ಕಳಸ, ಶಿವಕುಮಾರ್ ಯಾದವ್, ಬಷೀರ್ ಅಹ್ಮದ್ ಹೊಸಮನಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net