

ರಾಯಚೂರು: ಹುಡಿ ತುಂಬುವ ಮೂಲಕ ಮುತೈದೆಯರಿಗೆ ಸದಾ ಸೌಭಾಗ್ಯವತಿಯಾಗಿರುವಂತೆ ಹಾರೈಸಲಾಗುತ್ತದೆ. ಹುಡಿ ತುಂಬುವ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಎಂದು ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗಣೇಶ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ 1008 ಮುತೈದೆಯರಿಗೆ ಹುಡಿ ತುಂಬುವ ಕಾರ್ಯಕ್ರಮದಲ್ಲಿ ಧರ್ಮ ಸಂದೇಶ ನೀಡಿದರು.
ಅಜ್ಞಾನವೆಂಬುವುದು ರಾಕ್ಷಸನಿದ್ದಂತೆ, ಜ್ಞಾನವೆಂಬುವುದು ದೇವರಿದ್ದಂತೆ, ಜ್ಞಾನದ ಭಂಡಾರವೇ ಶರನ್ನವರಾತ್ರಿಯಾಗಿದೆ. ನವರಾತ್ರಿ ದಿನಗಳು ಮಹಿಳೆಯರಲ್ಲಿ ಶಕ್ತಿ ತುಂಬುವ ದಿನಗಳಾಗಿವೆ ಎಂದು ಹೇಳಿದರು.
ಇದೇ ವೇಳೆ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ ಮಾತನಾಡಿ, ದೇವಸ್ಥಾನದಲ್ಲಿ ಕಳೆದ ಎರಡು ವರ್ಷಗಳಿಂದ ನವರಾತ್ರಿ ಅಂಗವಾಗಿ ಮುತೈದೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಾನಬಾಳ ಸಿದ್ದನಗೌಡ, ಪ್ರತಿಭಾ ಗೋನಾಳ, ವೀರೇಂದ್ರಕುಮಾರ ಕುರ್ಡಿ, ಸು ಧಾಕರ ಅಸ್ಕಿಹಾಳ, ರಾಘವೇಂದ್ರ ಆಶಾಪೂರ ಸೇರಿದಂತೆ ಇತರರಿದ್ದರು.