ಹಸಿರೀಕರಣಕ್ಕೆ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೂಚನೆ

26072021 Raichur Global Biodiversity Day
Published on

ರಾಯಚೂರು: ಸ್ಥಳೀಯ ಸಂಸ್ಥೆಗಳು ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವ ಮೂಲಕ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಾಗತಿಕ ಜೀವ ವೈವಿಧ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕೆರೆಗಳು ಒತ್ತುವರಿಯಾಗಿದ್ದಲ್ಲಿ ಅವುಗಳನ್ನು ಗುರುತಿಸಿ ಸಂರಕ್ಷಣೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದರು.

ನಗರದಲ್ಲಿರುವ ಕೆರೆಗಳ ಸರ್ವೇ ನಡೆಸಿ ಸೌಂದರ್ಯಿಕರಣಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಹೆಚ್ಚಿನ ಕಾಳಜಿ ವಹಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಸಸ್ಯ ಸಂರಕ್ಷಣೆ, ಕೆರೆಗಳ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣದ ಜತೆಗೆ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲೆಯ ಅಕ್ಕಪಕ್ಕದಲ್ಲಿ ಎರಡು ನದಿಗಳು ಹರಿಯುತ್ತಿದ್ದು, ಇವುಗಳ ದಡದಲ್ಲಿ ಗಿಡಗಳನ್ನು ನೆಡುವ ಮೂಲಕ ಸಂಭವಿಸಬಹುದಾದ ಪ್ರವಾಹ ತಡೆಯಬಹುದು. ಜೀವ ವೈವಿಧ್ಯ ತಾಣಗಳಾದ ನಾರದಗಡ್ಡೆ, ಜಲದುರ್ಗ, ಗುಂತಗೋಳ ಪ್ರದೇಶಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸೂಚಿಸಿದರು.

ರಸ್ತೆ ವಿಸ್ತರಣೆ, ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ ಖಂಡನೀಯ. ಅರಣ್ಯ ಇಲಾಖೆ ಅನುದಾನ ಕೊರತೆ ಎದುರಿಸುತ್ತಿದ್ದು, ಹಣ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ನಗರದ ಹಸಿರೀಕರಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಕೆರೆಗಳ ಒತ್ತುವರಿ ಕುರಿತು ಸಮೀಕ್ಷೆ ನಡೆಸಿ ಅವುಗಳ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾದ ಜಂಬಲದಿನ್ನಿ ಗ್ರಾಮದ ಶಿವರಾಜ, ಜೇಗರಕಲ್ ಕೃಷ್ಣ, ಕಮಲಾಪುರದ ವೆಂಕಣ್ಣ ತಾತ ಅವರನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಡಿಸಿ ಕೆ.ಆರ್. ದುರಗೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಂದ್ರಣ್ಣ, ಎ. ವಿಜಯಕುಮಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net