ಕಸ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷಿಸಿದ ನಗರಸಭೆ ಪರಿಸರ ಇಂಜಿನಿಯರ್‌ಗೆ ನೋಟಿಸ್

garbage
Published on

ರಾಯಚೂರು: ನಗರಸಭೆ ವ್ಯಾಪ್ತಿಯ ಮುಖ್ಯರಸ್ತೆಗಳು ಹಾಗೂ ಎಲ್ಲಾ ವಾರ್ಡ್‌ಗಳಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸದೆ ಹಾಗೂ ಕಸ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ನಗರಸಭೆ ಪರಿಸರ ಇಂಜಿನಿಯರ್‌ಗೆ ಜೈಪಾಲರೆಡ್ಡಿಗೆ ಪೌರಾಯುಕ್ತ ನೋಟಿಸ್ ನೀಡಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ನೈರ್ಮಲ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಎಂಟು ನೈರ್ಮಲ್ಯ ವೃತ್ತಗಳನ್ನಾಗಿ ಮಾಡಿ ಪ್ರತಿ ವೃತ್ತಗಳಿಗೆ ನೈರ್ಮಲ್ಯ ನಿರೀಕ್ಷಕರು, ದಫೇದಾರ ಹಾಗೂ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಆದರೆ, ಸಮರ್ಪಕವಾಗಿ ಕಸ ವಿಲೇವಾರಿ ಆಗದೆ ಇರುವ ಬಗ್ಗೆ ಮಾಜಿ ಶಾಸಕ ಎ.ಪಾಪಾರೆಡ್ಡಿ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ರಝಾಕ್ ಉಸ್ತಾದ್ ಕಾಲುವೆಗಳನ್ನು ಸ್ವಚ್ಛ ಮಾಡದೆ ಕಸವನ್ನು ನಿರ್ವಹಣೆ ಮಾಡದೆ ಇರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್-19 ರ ಎರಡನೇಯ ಅಲೆಯು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಿಲ್ಲವೆಂದು ದೂರ ನೀಡಿದ್ದಾರೆ.

ಕೋವಿಡ್-19 ರ ಮುಂಜಾಗ್ರತ ಕ್ರಮಕ್ಕೆ ಸಂಬಂಧಿಸಿದಂತೆ ತಮಗೆ ಕೆಲವು ಜವಾಬ್ದಾರಿಗಳನ್ನು ವಹಿಸಿ ಮೇಲ್ವಿಚಾರಣೆ ಮಾಡಲು ಪೌರಾಯುಕ್ತರು ಆದೇಶಿಸಿದ ಮೇರೆಗೆ ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಹಾಗೂ ಸದಸ್ಯರು ನಿಮ್ಮನ್ನು ಸಂಪರ್ಕಿಸಲು ಫೋನ್ ಮಾಡಿದರೂ ಕೂಡ ನೀವು ಮೇಲಧಿಕಾರಿಗಳ ಗಮನಕ್ಕೆ ತರದೇ ನಿಮ್ಮ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಕರ್ತವ್ಯಲೋಪ ಎಸಗಿದ್ದಿರಿ. ಅಲ್ಲದೇ, ಹೊರ ಗುತ್ತಿಗೆಯ ಪೌರ ಕಾರ್ಮಿಕರ ಮಾರ್ಚ್ ಮತ್ತು ಏಪ್ರೀಲ್-2021 ರ ವೇತನ ನೀಡುವ ಬಗ್ಗೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಕಾಯ್ದೆ 2005 ರನ್ವಯ ಪ್ರಕರಣವನ್ನು ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುತ್ತದೆಂದು ಪೌರಾಯುಕ್ತ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net