

ರಾಯಚೂರು: ಜಿಲ್ಲೆಯಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಐದನೇ ದಿನವಾದ ಬುಧವಾರ ರಾತ್ರಿಯಿಂದ ಗುರುವಾರ ಮದ್ಯಾಹ್ನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿ ವಿಸರ್ಜನೆ ಮಾಡಲಾಯಿತು.
ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಜಿಲ್ಲಾದ್ಯಂತ ವಿಸರ್ಜನೆ ಮಾಡಲಾಗಿದ್ದು, ರಾಯಚೂರು ನಗರದಲ್ಲಿ 150 ಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.
ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ
ನಗರದ ವಿವಿಧ ಬಡಾವಣೆಗಳಿಂದ ವಿಸರ್ಜನೆಗಾಗಿ ಮೆರವಣಿಗೆ ಮೂಲಕ ಬಂದ ಗಣೇಶ ಮೂರ್ತಿಗಳಿಗೆ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಕೇಂದ್ರೀಯ ಗಜಾನನ ಸಮಿತಿಯಿಂದ ಪುಷ್ಪನಮನ ಸಲ್ಲಿಸಿ, ಮೂರ್ತಿ ಪ್ರತಿಷ್ಠಪನಾ ಮಂಡಳಿಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.
ಚಂದ್ರಮೌಳೇಶ್ವರ ವೃತ್ತ, ತೀನ್ ಕಂದಿಲ್ ವೃತ್ತ, ಕಲ್ಲಾನೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮಾಡಿ ಖಾಸಬಾವಿಗೆ ತರಲಾಯಿತು. ಗಣೇಶ ಮೂರ್ತಿಗಳ ಮೆರವಣಿಗೆ ತಡರಾತ್ರಿಯಿಂದ ಮದ್ಯಾಹ್ನದ ವರೆಗೂ ನಡೆಯಿತು. ಬೃಹತ್ ಧ್ವನಿವರ್ದಕಗಳ ಸದ್ದಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಜೆಯಿಂದ ಆರಂಭವಾದ ಗಣೇಶ ಮೂರ್ತಿ ವಿಸರ್ಜನೆ ಗುರುವಾರ ಮದ್ಯಾಹ್ನ 2 ಗಂಟೆಯವರೆಗೂ ನಡೆಯಿತು.
ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.