

ರಾಯಚೂರು: ಮಹತ್ಮಾಗಾಂಧೀ ಹಾಗೂ ಡಾ.ಬಿಆರ್ ಅಂಬೇಡ್ಕರ್ ಜೀವನದಲ್ಲಿ ಸಮಾನತೆಯನ್ನು ಅಳವಡಿಸಿಕೊಳ್ಳುವುದರ ಜತೆಗೆ ಸಮಾಜಕ್ಕೆ ಸಮಾನತೆಯ ಮಹತ್ವವನ್ನು ತಿಳಿಸಿಕೊಟ್ಟರು ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆಯ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಗಾಂಧೀಜಿಯವರ ಸರಳತೆಯನ್ನು ಮಾದರಿಯಾಗಿಸಿಕೊಂಡು ಅವರ ಬದುಕು, ನಡತೆ, ಜೀವನಕ್ರಮ, ಆದರ್ಶಪರವಾದ ಆಲೋಚನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ನಾಗರಿಕರಾಗಿ ಹೊರಬರಲು ಸಾದ್ಯವಾಗುತ್ತದೆ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಾಗ ವಿಚಾರ ಸಂಕೀರಣಗಳ ಆಯೋಜನೆ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿವಿಎಸ್‌ಪಿ ಸಂಯೋಜಕಿ ಡಾ.ಅಬಿದಾ ಬೇಗಂ, ಅನಂತಪುರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಸಂಶೋಧನಾ ಮತ್ತು ಯೋಜನಾ ಸಹವರ್ತಿ ಡಾ.ಕಲ್ಪನಾ ಕೃಷ್ಣಯ್ಯ, ಪ್ರಾಧ್ಯಾಪಕ ಪ್ರಣೇಶ್‌ಕುಲಕರ್ಣಿ, ಕಾರ್ಯಕ್ರಮದ ಸಂಯೋಜಕ ಮಹಾದೇವಪ್ಪ ಸೇರಿದಂತೆ ಅನೇಕರಿದ್ದರು.