

ರಾಯಚೂರು: ಗದಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೊಸದಾಗಿ ಜಿಲ್ಲಾ ಕಾರಾಗೃಹಗಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಬಂದಿದ್ದು, ಆಯಾ ಜಿಲ್ಲಾಡಳಿತ ಸೂಕ್ತ ಸ್ಥಳ ನೀಡಬೇಕು ಎಂದು ಉತ್ತರ ವಲಯ ಡಿಐಜಿ ಸೋಮಶೇಖರ್ ತಿಳಿಸಿದರು.
ನಗರದಲ್ಲಿನ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ, ಖೈದಿಗಳಿಗೆ ನೀಡಲಾಗುವ ಆಹಾರ, ಗೋದಾಮು, ಕುಡಿಯುವ ನೀರು, ಶೌಚಗೃಹ ಸೇರಿ ಜೈಲಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಬೀದರ್, ವಿಜಯಪುರದಲ್ಲಿ ತಲಾ 100 ಕೋಟಿ ರೂ.ವೆಚ್ಚದಲ್ಲಿ ಹೊಸ ಕಾರಾಗೃಹ ನಿರ್ಮಾಣ ನಡೆಯುತ್ತಿದೆ. ಕಾರಾಗೃಹ ಸಿಬ್ಬಂದಿಯ ವಸತಿ ನಿಲಯ ಶಿಥಿಲಗೊಂಡಿದ್ದಲ್ಲಿ ತಕ್ಷಣ ಅವುಗಳನ್ನು ದುರಸ್ತಿಗೊಳಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಖೈದಿಗಳನ್ನು ಭೇಟಿ ಮಾಡಲು ಬರುವ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ರಕ್ಷಣಾ ಗೋಡೆ ಎತ್ತರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.