ವೆಂಟಿಲೇಟರ್ ಖರೀದಿ ಅಕ್ರಮ ತನಿಖೆಯಾಗಲಿ; ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯ

Hampanagouda Badarli 6x4 Web - Copy
Published on

ರಾಯಚೂರು: ಕರೊನಾ ನಿಯಂತ್ರಣ ಮಾಡುವಲ್ಲಿ ವೈಫಲ್ಯವಾಗಿರುವ ರಾಜ್ಯ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ವೆಂಟಿಲೇಟರ್ ಖರೀದಿಯಲ್ಲೂ ಅಕ್ರಮ ನಡೆಸುವ ಮೂಲಕ ಜನರಿಗೆ ದ್ರೋಹ ಬಗೆದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ವಿಜಯವಾಣಿ ಪತ್ರಿಕೆಯಲ್ಲಿ ವೆಂಟಿಲೇಟರ್ ಖರೀದಿ ಅಕ್ರಮ ಕುರಿತು ಪ್ರಕಟವಾದ ವರದಿ ಪ್ರಸ್ತಾಪಿಸಿ, ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ದರದಲ್ಲಿ ವೆಂಟಿಲೇಟರ್ ಖರೀದಿ ನಡೆದಿದೆ. ಇದರಲ್ಲಿ ಸಚಿವರು ಸೇರಿ ಹಲವರು ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಕರೊನಾ ವ್ಯಾಪಕವಾಗಿ ಹರಡುವಂತಾಗಿದ್ದು, ಪ್ರತಿಪಕ್ಷಗಳೊಂದಿಗೆ ಚರ್ಚಿಸದೆ ತರಾತುರಿಯ ನಿರ್ಧಾರಗಳಿಂದ ಸಮಸ್ಯೆ ಎದುರಿಸುವಂತಾಗಿದೆ. ಸೋಂಕಿತರ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿಡುವ ನಿರ್ಧಾರದಿಂದ ಸೋಂಕು ಹೆಚ್ಚಾಗಿ ಹರಡುವಂತಾಗಿದೆ.

ಮುಂದಿನ ದಿನಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದಂತಹ ಸ್ಥಿತಿ ಎದುರಾಗುವ ಸಾಧ್ಯತೆಗಳಿದ್ದು, ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನುದಾನವನ್ನು ಆರೋಗ್ಯ ಸಂಬಂಧಿತ ಕೆಲಸಗಳಿಗೆ ಬಳಸಲು ಮುಂದಾಗಬೇಕು ಎಂದು ಹಂಪನಗೌಡ ಬಾದರ್ಲಿ ಸಲಹೆ ನೀಡಿದರು.

ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಮಾತನಾಡಿ, ಕರೊನಾ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಆಸ್ಪತ್ರೆಗಳನ್ನು ಸದೃಢಪಡಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ.

371 ಜೆ ಅಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿನ 30 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ತಡೆಹಿಡಿದಿದ್ದು, ಈ ಭಾಗದ ನಿರುದ್ಯೋಗಿಗಳಿಗೆ ನಿರಾಸೆಯುಂಟು ಮಾಡಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳಿಗೆ ಕೃಷಿ ಭೂಮಿಯನ್ನು ನೀಡಲು ಸರ್ಕಾರ ಮುಂದಾಗಿದೆ.

ತಿದ್ದುಪಡಿಯಿಂದ ಸಂಪತ್ತು ವಿಕೇಂದ್ರಿಕರಣದ ಆಶಯಕ್ಕೆ ಹೊಡೆತ ಬೀಳಲಿದ್ದು, ಬಡವರು, ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅನುಕೂಲವಾಗಲಿದ್ದು, ಸರ್ಕಾರದ ಈ ಎಲ್ಲ ನಿರ್ಧಾರಗಳನ್ನು ಖಂಡಿಸಿ ಪಕ್ಷದ ವತಿಯಿಂದ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

ಪಕ್ಷದ ಮುಖಂಡರಾದ ಎ.ವಸಂತಕುಮಾರ, ಜಯಣ್ಣ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಬಸವರಾಜ ರೆಡ್ಡಿ, ತಾಯಣ್ಣ ನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net