ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ; ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

09082022 h Anjaneya
Published on

ರಾಯಚೂರು: ಕಾಂಗ್ರೆಸ್‌ನಿಂದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಈ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಅಭಿಮಾನಿಗಳು ತಮ್ಮ ನಾಯಕ ಸಿಎಂ ಆಗಲಿ ಎಂದು ಘೋಷಣೆ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಗಿಲ್ಲೆಸುಗೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಲಾಗುತ್ತಿದೆ. 2013ರಲ್ಲಿ ಶಾಸಕರ ಅಭಿಪ್ರಾಯದ ಮೇರೆಗೆ ಹೈಕಮಾಂಡ್ ಸಿಎಂ ಹೆಸರು ಘೋಷಣೆ ಮಾಡಿತ್ತು. ಆದರೆ ಬಿಜೆಪಿಯಲ್ಲಿ ಸಿಎಂ ಆಯ್ಕೆ ಹೇಗೆ ಮಾಡಲಾಗುತ್ತದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಆಲಿಂಗನವಾಗಿರುವುದು ಪ್ರೀತಿ, ವಾತ್ಸಲ್ಯದ ಪ್ರತೀಕ ಎಂದರು.

ದಲಿತರನ್ನು ಸಿಎಂ ಮಾಡಬೇಕೆನ್ನುವ ಕೂಗು ಕೇಳಿಬರುತ್ತಿದೆ. ಚುನಾವಣೆಯಲ್ಲಿ ಪರಾಭವಗೊಂಡಿದ್ದ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ರಾಜ್ಯಸಭೆ ಪ್ರತಿಪಕ್ಷದ ನಾಯಕನನ್ನಾಗಿ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಹೇಳಿದರು. ಶಾಸಕ ಬಸನಗೌಡ ದದ್ದಲ್, ಮುಖಂಡ ಎಚ್.ಬಿ.ಮುರಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net