

ರಾಯಚೂರು: ಜಾನಪದ ಸಾಹಿತ್ಯವನ್ನು ಪ್ರತಿಯೊಬ್ಬರಿಗೂ ಉಣಬಡಿಸಲು ಜಾನಪದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಸಚಿವೆ, ಹಿರಿಯ ಸಾಹಿತಿ ಡಾ.ಆರ್.ಲೀಲಾದೇವಿ ಪ್ರಸಾದ್ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನದಿಂದ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಂತಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮನ್ನುದ್ದೇಶಿಸಿ ಭಾನುವಾರ ಮಾತನಾಡಿದರು.
ಜಾನಪದ ಎಂಬುವುದು ಕನ್ನಡ ಸಾಹಿತ್ಯದ ಬೇರು ಇದ್ದಂತೆ. ಜಾನಪದ ಸಾಹಿತ್ಯವನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು. ಕನ್ನಡದ ಮೂಲವಾಗಿರುವ ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದರು.
ಪ್ರತಿಯೊಂದು ಧರ್ಮ, ಸಮುದಾಯಕ್ಕೆ ಒಂದು ಗ್ರಂಥವಿರುತ್ತದೆ ಅದರಂತೆ ಕನ್ನಡಿಗರಿಗೂ ಒಂದು ಗ್ರಂಥವನ್ನು ರಚನೆಯಾಗಬೇಕು ಅದು ವಚನ ಸಾಹಿತ್ಯವಾಗಿರಬೇಕು. ಏಕೆಂದರೆ ವಚನ ಸಾಹಿತ್ಯಕ್ಕೆ ಅದರದ್ದೆ ಆದ ಮೌಲ್ಯವಿದೆ ಎಂದು ತಿಳಿಸಿದರು.
ಇದೇ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನದಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಪ್ರತಿಷ್ಠಾನವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾನಪದ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರವನ್ನು ಪ್ರತ್ಸಾಹಿಸಬೇಕು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಾಂಸ್ಕೃತಿಕ ನೀತಿ ಬರಬೇಕು. ಕಲಾ ಕ್ಷೇತ್ರದಲ್ಲಿ ರಾಜಕೀಯ ಮುಳಿಗಿದೆ. ಅದರಿಂದ ಹೊರ ಬಂದಾಗ ಮಾತ್ರ ಕಲೆಯನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಸುಗೂರಿನ ಕೊಡಂಗಲ್ ಚೌಕಿ ಮಠದ ಸಿದ್ದಲಿಂಗ ಸ್ವಾಮೀಜಿ, ಸಿರವಾರದ ನೀಲಾಂಬಿಕ ಆಶ್ರಮದ ವೀರಭದ್ರ ಸ್ವಾಮೀಜಿ, ನಗರಸಭೆ ಹಿರಿಯ ಸದಸ್ಯ ಜಯಣ್ಣ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಸಾಹಿತಿಗಳಾದ ಬಸವಪ್ರಭು ಪಾಟೀಲ್ ಬೆಟ್ಟದೂರು, ಅಯ್ಯಪ್ಪಯ್ಯ ಹುಡಾ, ಪ್ರಮುಖರಾದ ರಾಮನಗೌಡ ಏಗನೂರು, ಬಾಬುರಾವ್ ಶೇಗುಣಸಿ, ಕೇಶವರೆಡ್ಡಿ, ವೆಂಕಟೇಶ್ವರ ರಾವ್, ವಿನೋದ ರೆಡ್ಡಿ, ಶರಣಪ್ಪ ಗೋನಾಳ, ಪ್ರತಿಭಾ ಗೋನಾಳ ಸೇರಿದಂತೆ ಇತರರಿದ್ದರು.