ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಗತ್ಯ; ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯ

11072021 Sindhanoor Private Education Organizations
Published on

ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆ | ರಾಯಚೂರು ಜಿಲ್ಲಾ ಒಕ್ಕೂಟ ರಚನೆ, ಕಚೇರಿ ಪ್ರಾರಂಭಕ್ಕೆ ಸರ್ವಾನುಮತದ ತೀರ್ಮಾನ

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ 348 ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಒಕ್ಕೂಟ ರಚನೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಭಾನುವಾರ ಏರ್ಪಡಿಸಿದ್ದ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಮತ್ತು 371(ಜೆ) ಕಲಂ ಅಡಿ ಶಿಕ್ಷಣ ಸಂಸ್ಥೆಗಳ ಹಕ್ಕುಗಳ ಕುರಿತ ಸಭೆಯಲ್ಲಿ ಮಾತನಾಡಿದರು.

ಒಕ್ಕೂಟದಲ್ಲಿ ಯಾವುದೇ ತಾರತಮ್ಯ ಬೇಡ, ಎಲ್ಲರೂ ಇರಬೇಕು. ಗುಂಪುಗಾರಿಕೆಗೆ ಅವಕಾಶ ಕೊಡಬಾರದು. ನೌಕರಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ 371(ಜೆ)ಕಲಂ ಸೇರಿಸಬೇಕು. ಒಕ್ಕೂಟ ರಚನೆಗೆ ಜತೆಗೆ ಕಚೇರಿಯೂ ಬೇಕು. ಇದರಿಂದ ವ್ಯವಹಾರ ಮಾಡಲು ಅನುಕೂಲವಾಗಲಿದೆ ಎಂದರು.

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ ಮಾತನಾಡಿ, 371(ಜೆ) ಜಾರಿಯಾಗಿ 8 ವರ್ಷ ಗತಿಸಿವೆ. ಎಚ್‌ಕೆಡಿಬಿ ವೆಂಟಿಲೇಟರ್‌ನಲ್ಲಿದೆ. ಅದನ್ನು ಪುನಃರಚಿಸಬೇಕು. ಈ ಹಿಂದೆ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ 25 ವಿಷಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಒಪ್ಪಿತ್ತು. ಕಾಟಾಚಾರಕ್ಕೆ ಎಚ್‌ಕೆಡಿಬಿ ಮಂಡಳಿಗೆ ಅಧ್ಯಕ್ಷರಿದ್ದಾರೆ. ಸಂಸ್ಥೆಗಳಿಗೆ ಮಂಡಳಿಯಲ್ಲಿ ಸಹಾಯಧನ ಕೇಳುವಾಗ ಸಿಎ ಸೈಟ್ ಉಚಿತ ಸಿಗುವಂತಾಗಬೇಕು. 1500 ಕೋಟಿ ರೂ. ಅನುದಾನ ರಾಜ್ಯದ ಅಭಿವೃದ್ಧಿ ಮಾನದಂಡಕ್ಕೆ ಅನುಗುಣವಾಗಿ ಎಚ್‌ಕೆಡಿಬಿಗೆ ಕೊಡಬೇಕು ಎಂದರು.

ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ಬಸವರಾಜ ಮಾತನಾಡಿ, ಈಗಾಗಲೇ ಪ್ರತಿ ತಾಲೂಕು ಸಂಘ ರಚಿಸಿಕೊಂಡು ರಾಯಚೂರು ಜಿಲ್ಲಾ ಒಕ್ಕೂಟ ರಚಿಸಲಾಗಿದೆ. ಈಗ ಪ್ರಾಥಮಿಕ, ಪ್ರೌಢ, ಪಿಯು ಕಾಲೇಜ್, ಪದವಿ ಹಾಗೂ ಅದಕ್ಕಿಂತ ಮೇಲ್ಪಟ್ಟು ಪ್ರತ್ಯೇಕ ಒಕ್ಕೂಟ ರಚನೆ ಮಾಡಬೇಕು ಎಂದರು.

ತಾರಾನಾಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾಗರಾಜ ಮಸ್ಕಿ ಮಾತನಾಡಿದರು. ಸಿಂಧನೂರು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ವೈ.ನರೇಂದ್ರನಾಥ, ಪ್ರ.ಕಾರ್ಯದರ್ಶಿ ವೀರೇಶ ಅಗ್ನಿ, ದೇವದುರ್ಗ ತಾಲೂಕು ಅಧ್ಯಕ್ಷ ಚನ್ನಪ್ಪ ಗಬ್ಬೂರ, ಮಸ್ಕಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮಾನ್ವಿ ತಾಲೂಕು ಅಧ್ಯಕ್ಷ ಶರ್ಫುದ್ದೀನ್, ಲಿಂಗಸುಗೂರು ತಾಲೂಕು ಅಧ್ಯಕ್ಷ ಆದಯ್ಯ ದಳಪತಿ, ರಾಯಚೂರು ತಾಲೂಕು ಅಧ್ಯಕ್ಷ ಕೇಶವರಡ್ಡಿ, ಸಿರವಾರ ತಾಲೂಕು ಅಧ್ಯಕ್ಷ ಚಂದ್ರಶೇಖರ ಬಳ್ಳಟಗಿ, ವಿನಯಕುಮಾರ ಲಿಂಗಸುಗೂರು, ದುದ್ದುಪೂಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಇದ್ದರು.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: ಸಿಂಧನೂರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಒಕ್ಕೊರಲನಿಂದ ತೆಗೆದುಕೊಳ್ಳಲಾಯಿತು. 371(ಜೆ) ಕಲಂನಡಿ ರಾಯಚೂರು ಜಿಲ್ಲೆ ಖಾಸಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಪಡೆಯಬೇಕು, ಇದಕ್ಕಾಗಿ ಜಿಲ್ಲೆಯ ಶಾಸಕರ ಬಳಿ ನಿಯೋಗ ತೆಗೆದುಕೊಂಡು ಹೋಗುವುದು, ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತಲು ಶಾಸಕರನ್ನು ಒತ್ತಾಯಿಸುವುದು, ಸರ್ವಾನುಮತದಿಂದ ಜಿಲ್ಲಾ ಒಕ್ಕೂಟ ರಚನೆ, ಕಚೇರಿ ಪ್ರಾರಂಭ ಮಾಡುವುದು ಮೊದಲಾದ ತೀರ್ಮಾನ ತೆಗೆದುಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net