

ರಾಯಚೂರು: ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕಿಳಿಸಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಶೀಘ್ರ ಅಂತಿಮಗೊಳಿಸಲಾಗುವುದು ಎಂದರು.
ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿಯಾಗಿ ವಿಜಯಕುಮಾರ, ಮಸ್ಕಿ ಕ್ಷೇತ್ರದಲ್ಲಿ ಗಂಗಾ, ಸಿಂಧನೂರು ಕ್ಷೇತ್ರದಲ್ಲಿ ನನ್ನ ಹೆಸರನ್ನು ಪಕ್ಷದ ವರಿಷ್ಠರು ಘೋಷಣೆ ಮಾಡಿದ್ದಾರೆ ಎಂದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಗಾಗಿ ಒಂಬತ್ತು ಅಂಶಗಳನ್ನು ಒಳಗೊಂಡಿರುವ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಮೂರು ಲಕ್ಷಕಿಂತ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡಲಾಗುವುದು.ಮದ್ಯ ನಿಷೇಧ, ಉಚಿತ ಮತ್ತು ಗುಣಮಟ್ಟದ ಶಿಕ್ಷಣ, ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಪದ್ಧತಿ ಜಾರಿ, ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮವಹಿಸಲಾಗುವುದು ಎಂದರು.
ರಾಜ್ಯಾದ್ಯಂತ ಕೆರೆಗಳ ಅಂತರ್ಜಲ ಮಟ್ಟ ಸುಧಾರಣೆಗೆ ಕ್ರಮ, ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2 ಸಾವಿರ ರೂ. ಮಾಶಾಸನ, ಲಂಚ ಮುಕ್ತ ಕರ್ನಾಟಕಕ್ಕಾಗಿ ಮತ್ತು ದಕ್ಷ ಆಡಳಿತಕ್ಕಾಗಿ ಲೋಕಾಯುಕ್ತ ಬಲಿಷ್ಠಗೊಳಿಸಲಾಗುವುದು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಗೋಮರ್ಸಿ ತಿಳಿಸಿದರು. ಪಕ್ಷದ ಪದಾಧಿಕಾರಿಗಳಾದ ಗಂಗಾ, ವಿಜಯಕುಮಾರ, ಆದಪ್ಪ, ಚನ್ನಬಸವ, ಪಂಪಣ್ಣ ಚ್ಯಾಗಿ, ರಾಘವೇಂದ್ರ ಇತರರಿದ್ದರು.