

ರಾಯಚೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಣ ಬಲದ ಮೇಲೆ ಚುನಾವಣೆ ಎದುರಿಸುತ್ತಿವೆ. ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ಕರ್ನಾಟಕ ರಾಷ್ಟ್ರ ಸಮಿತಿ ಜನರಿಂದ ದೇಣಿಗೆ ಸಂಗ್ರಹಕ್ಕಾಗಿ ನೂರು ಕೋಟಿ ದೇಣಿಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಕಳೆದ ತಿಂಗಳು ನ.19ರಂದು ತಿರುಪತಿಯಿಂದ ಆರಂಭವಾಗಿರುವ ಪಾದಯಾತ್ರೆ ಮಂಗಳವಾರ ಜಿಲ್ಲೆಗೆ ಆಗಮಿಸಲಿದ್ದು, ಎರಡು ದಿನಗ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಲಾಗುವುದು. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆ ಎದುರಿಸಲಾಗುವುದು ಎಂದರು.
ಸಿಂಧನೂರಿನಲ್ಲಿ ಮಂಗಳವಾರ ಹಾಗೂ ರಾಯಚೂರು ನಗರದಲ್ಲಿ ಬುಧವಾರ ಪಾದಯಾತ್ರೆ ನಡೆಯಲಿದ್ದು, ಜನವಿರೋಧಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎದುರಿಸಲು ಜನರು ದೇಣಿಗೆ ನೀಡುವ ಮೂಲಕ ಪಕ್ಷವನ್ನು ಬೆಂಬಲಿಸುವ ಭರವಸೆಯಿದೆ ಎಂದು ನಿರುಪಾದಿ ಗೋಮರ್ಸಿ ಹೇಳಿದರು. ಪದಾಧಿಕಾರಿಗಳಾದ ನಾಗರಾಜ ಎಲೆಕೂಡ್ಲಗಿ, ಶರಣಪ್ಪ ಗೋರೆಬಾಳ, ಚನ್ನಬಸವ ಸೋಮ್ಲಾಪುರ, ದ್ಯಾವಣ್ಣ ಪುಲದಿನ್ನಿ ಉಪಸ್ಥಿತರಿದ್ದರು.