ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಕ್ಷಣ ಬಲವರ್ಧನೆ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕಾಗಿದ್ದು, ಸಂಘಟನೆ ವಿದ್ಯಾರ್ಥಿ ಪ್ರಣಾಳಿಕೆಯನ್ನು ತಯಾರಿಸಿದ್ದು, ಈ ಬೇಡಿಕೆ ಈಡೇರಿಸುವ ಖಚಿತ ವಾಗ್ದಾನ್ ಮತ್ತು ಬದ್ಧತೆಯನ್ನು ಪಕ್ಷಗಳು ಖಚಿತಪಡಿಸಬೇಕು ಎಂದು ಎಸ್‌ಐಒ ಜಿಲ್ಲಾ ಸಮಿತಿ ಸದಸ್ಯ ಜುಬೇರ್ ಖಾನ್ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಬದ್ಧತೆ ಖಚಿತ ಪಡಿಸುವ ಪಕ್ಷಕ್ಕೆ ಮತ ನೀಡುವಂತೆ ಯುವ ಜನರಲ್ಲಿ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಶಿಕ್ಷಣ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಮೂಲ ಹಕ್ಕುಗಳು ಸರ್ಕಾರದಿಂದ ನಿರ್ಲಕ್ಷಕ್ಕೆ ಒಳಗಾಗುತ್ತಿವೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೇ.50ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಹುದ್ದೆಗಳನ್ನು ತುಂಬುವ ಮೂಲಕ ಶಕ್ತಿ ನೀಡಬೇಕಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯ ಸ್ಥಿತಿ ಚಿಂತಾಜನಕವಾಗಿದೆ. ಬಹುತೇಕ ವಿವಿಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ವಿಫಲವಾಗುತ್ತಿವೆ.
ಅಂಗನವಾಡಿ ವ್ಯವಸ್ಥೆಯನ್ನು ಸಶಕ್ತಗೊಳಿಸಬೇಕಾಗಿದೆ. ಕಡ್ಡಾಯ ಶಿಕ್ಷಣ ಹಕ್ಕನ್ನು ಖಾತ್ರಿ ಪಡಿಸಬೇಕು. ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು. ವಿವಿಯಲ್ಲಿನ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದು ಜುಬೇರ್ ಖಾನ್ ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ನೂರ್ ಮಹ್ಮದ್, ಪದಾಧಿಕಾರಿಗಳಾದ ಅಬ್ದುಲ್ ಹನ್ನನ್, ಜುಬೇರ್ ಖಾನ್, ಇಲಿಯಾದ್ ನಲಬಂಡ್ ಉಪಸ್ಥಿತರಿದ್ದರು.