

ರಾಯಚೂರು: ಶಿಕ್ಷಕರಿಗೆ ತಮ್ಮ ವೃತ್ತಿಯಿಂದ ದೊರೆಯುವ ಲಾಭ ಮತ್ತು ಸಾಕ್ಷಾತ್ಕಾರ ಎಂಬ ಎರಡು ಅಂಶಗಳ ಬಗ್ಗೆ ಸ್ಪಷ್ಟತೆ ಇರಬೇಕು. ಬೋಧನೆ ಮಾಡುತ್ತಾ ಶಿಕ್ಷಕರು ತಾವು ಹೆಚ್ಚಿನ ವಿಷಯಗಳಲ್ಲಿ ಜ್ಞಾನವಂತರಾಗುತ್ತಾರೆ ಜತೆಗೆ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅವರಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡಿದಂತಾಗುತ್ತದೆ ಎಂದು ವಿಶ್ವದ ಅತಿ ಕಿರಿಯ ಮುಖ್ಯಗುರು ಎಂದು ಪ್ರಸಿದ್ಧಿ ಹೊಂದಿರುವ ಬಾಬರ್ ಅಲಿ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಬುಧವಾರ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಹಲವು ಕಾರಣಗಳಿರುತ್ತವೆ. ಅಂತಹ ಕಾರಣಗಳನ್ನು ಹುಡುಕಿ ಅದನ್ನು ಸರಿಪಡಿಸಿ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರಬಲ್ಲ ಸಾಮರ್ಥ್ಯ ಶಿಕ್ಷಕರಲ್ಲಿ ಮಾತ್ರ ಇರುತ್ತದೆ ಎಂದರು.
ಪಶ್ಚಿಮ ಬಂಗಾಳದ ಮುಷಿರಾಬಾದ್ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅಭ್ಯಾಸ ಮಾಡಿರುವ ನಾನು. 9ನೇ ವಯಸ್ಸಿನಲ್ಲಿ ಕಲಿತ ಶಿಕ್ಷಣವನ್ನು ಇತರರಿಗೂ ಕಲಿಸಬೇಕೆಂಬ ಆಲೋಚನೆಯಿಂದ ಆನಂದ ಶಿಕ್ಷಾ ನಿಕೇತನ ಶಾಲೆಯನ್ನು ಪ್ರಾರಂಭಿಸಲಾಯಿತು. ಇದೀಗ ಶಾಲೆಯಲ್ಲಿ 8000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಪ್ರತಿಯೊಬ್ಬರ ಸಹಕಾರದಿಂದ ಉಚಿತ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದರು.
ಇದೇ ವೇಳೆ ಎಸಿ ಗಜಾನನ ಬಾಲೆ ಮಾತನಾಡಿ, ಬಾಬರ್ ಅಲಿ ತಮ್ಮ 26ನೇ ವಯಸ್ಸಿನಲ್ಲಿ ಮುಖ್ಯೋಪಾಧ್ಯಾಯರಾಗಿ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಶಿಕ್ಷಕರು ಅವರ ಮಾರ್ಗದರ್ಶನವನ್ನು ಸದುಪಯೋಗಪಡೆದುಕೊಂಡು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಡಿಡಿ ಕೆ.ಡಿ.ಬಡಿಗೇರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಚಾರ್ಯೆ ಆರ್.ಇಂದಿರಾ, ಪದವಿಪೂರ್ವ ಇಲಾಖೆಯ ಪ್ರಾಭಾರ ಡಿಡಿ ಸೋಮಶೇಖರಪ್ಪ ಹೊಕ್ರಾಣಿ, ಬಿಇಒ ಚಂದ್ರಶೇಖರ ಭಂಡಾರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ರಂಗಸ್ವಾಮಿ, ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕ ಸೈಯದ್ ಹಫೀಜುಲ್ಲಾ, ಅಕ್ಷರದಾಸೋಹ ಅಧಿಕಾರಿ ಈರಣ್ಣ ಕೋಸಗಿ ಸೇರಿದಂತೆ ಇತರರಿದ್ದರು.