ಡ್ರಗ್ಸ್ ಜಾಲ ತಡೆಗೆ ಕಠಿಣ ಕ್ರಮಕೈಗೊಳ್ಳಿ; ಶ್ರೀರಾಮ ಸೇನೆ ಆಗ್ರಹ

100920 Raichur Srirama Sena Request
ಡ್ರಗ್ಸ್ ಜಾಲ ತಡೆಗೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಶ್ರೀರಾಮ ಸೇನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
Published on

ರಾಯಚೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಚಿತ್ರರಂಗದಲ್ಲಿನ ಡ್ರಗ್ಸ್ ಜಾಲದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಒತ್ತಾಯಿಸಿದೆ.

ಈ ಕುರಿತು ಸಂಘಟನೆ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿ, ಡ್ರಗ್ಸ್ ಮಾರಾಟ ಮತ್ತು ಸಾಗಣೆ ಮಾಡುವವರನ್ನು ರಾಷ್ಟ್ರೀಯ ಸುರಕ್ಷ ಕಾಯ್ದೆಯಡಿ ಬಂಧಿಸಲು ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿದರು.

ಡ್ರಗ್ಸ್ ಮಾರಾಟ ತಡೆಗೆ ಶಾಲಾ, ಕಾಲೇಜು ಪರಿಸರದಲ್ಲಿ ಗುಪ್ತಚರ ಇಲಾಖೆ ಗಸ್ತು ಹೆಚ್ಚಿಸಬೇಕು. ಡ್ರಗ್ಸ್ ಪತ್ತೆಯಾಗುವ ವ್ಯಾಪ್ತಿಯಲ್ಲಿನ ಠಾಣಾಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು. ಪಬ್, ಕ್ಲಬ್, ಲೈವ್ ಬ್ಯಾಂಡ್, ಸ್ಟಾರ್ ಹೋಟೆಲ್‌ನಲ್ಲಿ ನಿರಂತರ ತನಿಖೆ ನಡೆಸಬೇಕು.

ರಾಜಕಾರಣಿಗಳು, ದೊಡ್ಡ ಉದ್ದಿಮೆದಾರರು, ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ಕುಳಗಳು ಈ ದಂಧೆಯ ಹಿಂದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಬಾವಿ, ಪದಾಧಿಕಾರಿಗಳಾದ ಪ್ರಶಾಂತ್ ಭಂಡಾರಿ, ನವೀನ್ ಕಡಗೋಲ್, ವೀರೇಶ ನಾಯಕ್, ರಾಕೇಶ್ ಮಡಿವಾಳ, ವೆಂಕಟೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net