

ರಾಯಚೂರಿನಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನ
ರಾಯಚೂರು: ಪ್ರೀತಿಯ ಮೂಲಕ ಕಟ್ಟಬೇಕಾದ ದೇಶವನ್ನು ಇಂದು ದ್ವೇಷದ ಮೂಲಕ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ದ್ವೇಷ ಮತ್ತು ಅಸೂಯೆ ಇದ್ದಂಥ ದೇಶ ಅಭಿವೃದ್ಧಿಯಿಂದ ದೂರ ಉಳಿಯುತ್ತವೆ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕರ್ನಾಟಕ ಜನಶಕ್ತಿ ಮೂರನೇ ರಾಜ್ಯ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಮಾನವ ಸಂಬಂಧಗಳನ್ನು ಕದಡಿ ದೇಶ ಕಟ್ಟುವ ಕೆಲಸ ನಮ್ಮ ಮುಂದೆ ನಡೆಯುತ್ತಿದೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಪ್ರೇಮದ ಭಾರತ ಕಟ್ಟುವ ಕೆಲಸ ಮಾಡಬೇಕಾಗಿದೆ. ಅಪರಾಧದ ವಿರುದ್ಧ ಹೋರಾಡುವವರು ಸೆರೆಮನೆಗೆ ಹೋಗುತ್ತಿದ್ದಾರೆ. ಪತ್ರಕರ್ತರು, ಹೋರಾಟಗಾರರು, ಬುದ್ಧಿಜೀವಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಪ್ರಶ್ನಿಸುವವರಿಗೆ ಕೊಲೆ ಬೆದರಿಕೆ ಹಾಕುವಂತಹ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.