

ರಾಯಚೂರು: ಲೋಹಿಯವಾದಿ ಆಗಿದ್ದ ಡಾ.ಎಂ.ನಾಗಪ್ಪ ವಕೀಲರು ಕೇವಲ ಶಿಕ್ಷಣ, ವಕಾಲತ್ತು ಮಾತ್ರವಲ್ಲದೆ ಸ್ವಾತಂತ್ರ್ಯ ಚಳವಳಿಯಲ್ಲಿಯೂ ತೊಡಗಿಸಿಕೊಂಡಿದ್ದರು. ಅವರ ಪುಣ್ಯಸ್ಮರಣೆ ನಿಮಿತ್ತ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ನಾಗಪ್ಪ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರತಿಷ್ಠಾನದ 21ನೇ ವಾರ್ಷಿಕೋತ್ಸವ ಹಾಗೂ ಡಾ.ಎಂ.ನಾಗಪ್ಪ ವಕೀಲರ 14ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಎಂ.ನಾಗಪ್ಪ ವಕೀಲರು ಕಾನೂನು, ಸಂಸದೀಯ ಹಾಗೂ ಸಮಾಜವಾದಿ ಜ್ಞಾನ ಹೊಂದಿದ್ದರು. ಅವರನ್ನು ಜಿಲ್ಲೆ ಮಾತ್ರವಲ್ಲದೆ ಇಡೀ ನಾಡು ಸ್ಮರಿಸಿಕೊಳ್ಳಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿ, ಬಡವರ ಸಮಸ್ಯೆಗಳನ್ನು ಪರಿಹರಿಸಲು ಹಮಾಲರ ಸಂಘ, ಪೌರ ಕಾರ್ಮಿಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಅವರ ಕಾರ್ಯ ಸ್ಮರಣೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಸೋಮವಾರಪೇಟೆ ಹಿರೇಮಠದ ಅಭಿನವ ವೀರ ಶಿವಾಚಾರ್ಯರು ಮಾತನಾಡಿ, ರಾಯಚೂರಿಗೆ ಉತ್ತಮ ಕೊಡುಗೆ ಕೊಟ್ಟವರಲ್ಲಿ ನಾಗಪ್ಪ ಅವರು ಮೊದಲಿಗರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದರು. ಬದುಕಿದಷ್ಟು ದಿನ ಒಳ್ಳೆಯದನ್ನು ಮಾಡಿದರು ಎಂದು ಸ್ಮರಿಸಿದರು. ನಂತರ ಬಿಆರ್‌ಬಿ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಎ.ಪಂಚಾಕ್ಷರಯ್ಯ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.