ವಸತಿ ನಿಲಯ ಕಾರ್ಮಿಕರ ಬಾಕಿ ವೇತನ ಪಾವತಿಸಿ

21-02-Shiva-2
Published on

ರಾಯಚೂರು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದ್ದು, ಶೀಘ್ರ ಪಾವತಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.

ಸಮರ್ಪಕವಾಗಿ ವೇತನ ಪಾವತಿಯಾಗದಿರುವುದರಿಂದ ಕಾರ್ಮಿಕರು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯ ಕಾರ್ಮಿಕರಿಗೆ ಎಂಟು ತಿಂಗಳಿಂದ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯ ಕಾರ್ಮಿಕರಿಗೆ ಕಳೆದ 4 ತಿಂಗಳಿಂದ ವೇತನ ಪಾವತಿ ಮಾಡಿಲ್ಲ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ ಕಾರ್ಮಿಕರ ವೇತನ ಪಾವತಿಗೆ ಹಣಕಾಸು ಇಲಾಖೆ ಅನುದಾನ ನೀಡಿಲ್ಲ. ಸಕಾಲಕ್ಕೆ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ವರದಿಯನ್ನು ಅಧಿಕಾರಿಗಳು ನೀಡಿ ಅನುಮೋದನೆ ಪಡೆಯದಿರುವುದು ಸಮಸ್ಯೆಗೆ ಕಾರಣವಾಗಿದೆ.

ಕಾರ್ಮಿಕರಿಗೆ ವಾರದ ರಜೆ, ರಾಷ್ಟ್ರೀಯ ಹಬ್ಬ ಹಾಗೂ ಸಾರ್ವತ್ರಿಕ ರಜೆಗಳನ್ನು ನೀಡಬೇಕು. ಸಮವಸ್ತ್ರ, ಪಿಎಫ್, ಇಎಸ್‌ಐ ವಂತಿಗೆ ಪಾವತಿಸಿದ ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸಲಾಯಿತು. ಪದಾಧಿಕಾರಿಗಳಾದ ಅಮರೇಶ, ಹುಲಿಗೆಪ್ಪ, ಆಶ್ವತ್ಥಾಮ, ಮೋಹನ, ಪಾರ್ವತಿ, ಮಹೇಶ್ವರಿ, ಸುಲೋಚನಾ, ನಾಗಮ್ಮ, ನರಸಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net