

ರಾಯಚೂರು: ಇತರ ವೃತ್ತಿಯವರಿಗಿಂತ ವಕೀಲರಲ್ಲಿ ಸಾಮಾಜಿಕ ಕಳಕಳಿ ಹೆಚ್ಚಾಗಿ ಕಾಣುತ್ತೇವೆ. ವಕೀಲರು ತನ್ನ ವೃತ್ತಿಯ ಜತೆಗೆ ಸಮಾಜದ ಒಳಿತಿನ ಬಗ್ಗೆ ಯೋಚಿಸುವ ವ್ಯಕ್ತಿತ್ವ ಹೊಂದಿರುತ್ತಾನೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಅಭಿಪ್ರಾಯಪಟ್ಟರು.
ಸ್ಥಳೀಯ ಸ್ಪಂದನಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜನತೆಯ ವಕೀಲ ಎನ್.ಪದ್ಮವರ್ಧನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸಾಮಾಜಿಕ ಕಳಕಳಿ ಹೊಂದಿರುವುದರಿಂದಲೇ ಅನಾದಿ ಕಾಲದಿಂದಲೂ ವಕೀಲರು ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು ಉನ್ನತ ಹುದ್ದೆಗಳಿಗೆ ತಲುಪಿದ್ದಾರೆ ಎಂದರು.
ವಕೀಲ ಪದ್ಮವರ್ಧನ ತಮ್ಮ ವೃತ್ತಿಯಲ್ಲಿ ಬದ್ಧತೆ ಜತೆಗೆ ಮನುಷ್ಯನಾಗಿ ಮಾನವೀಯ ಮೌಲ್ಯಗಳನ್ನು ಹೊಂದಿರುವಂತಹ ಸರಳ ವ್ಯಕ್ತಿಯಾಗಿದ್ದರು. ಅವರು ಇಂದು ನಮ್ಮ ಜತೆಗೆ ಇಲ್ಲದಿದ್ದರೂ ಅವರ ಹೋರಾಟದ ಮನೋಭಾವ ಅವರನ್ನು ಮರೆಯದಂತೆ ಮಾಡಿದೆ ಎಂದು ಮುಸ್ತಫಾ ಹುಸೇನ್ ಹೇಳಿದರು.
ಕರ್ನಾಟಕ ಜನಶಕ್ತಿ ಸಂಚಾಲಕ ಕುಮಾರ ಸಮತಳ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಕೆಲವರು ಮಾತ್ರ ತಮ್ಮ ಕೊಡುಗೆಯಿಂದಾಗಿ ನೆನಪಿನಲ್ಲಿ ಉಳಿಯುತ್ತಾರೆ. ಅವರಲ್ಲಿ ಎನ್.ಪದ್ಮವರ್ಧನ ಒಬ್ಬರಾಗಿದ್ದಾರೆ ಎಂದರು.
ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಜನಪರ ಆಲೋಚನೆ, ತುಳಿತಕ್ಕೆ ಒಳಗಾದವರ ಸಮಸ್ಯೆಗಳಿಗೆ ಮಿಡಿಯುವ ಮನಸ್ಸು ಹೊಂದಿದ್ದ ಪದ್ಮವರ್ಧನ, ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಜನರಿಗೆ ಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುತ್ತಿದ್ದರು ಎಂದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂಚಾಲಕ ಎಂ.ಆರ್.ಭೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ, ವಿವಿಧ ಸಂಘಟನೆಗಳ ಮುಖಂಡರಾದ ಮಹೆಬೂಬ್ ಪಾಷಾ ಮೂಲಿಮನಿ, ಜೆ.ಬಿ.ರಾಜು, ಡಾ.ರಜಾಕ್ ಉಸ್ತಾದ್, ಎಚ್.ದೊಡ್ಡಪ್ಪ, ಲಕ್ಷ್ಮಪ್ಪ ಭಂಡಾರಿ, ಅನಿತಾ ಶಿರೋಳ್ಕರ್ ಉಪಸ್ಥಿತರಿದ್ದರು.