ನ್ಯಾಯಾಲಯ ಸಂಕೀರ್ಣ ಕಾಮಗಾರಿ ಆರಂಭಿಸಿ

28032021 Raichur Court Construction
Published on

ರಾಯಚೂರು: ನಗರದ ಹೈದರಾಬಾದ್ ರಸ್ತೆಯಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ನ್ಯಾಯವಾದಿಗಳ ಸಂಘ ಒತ್ತಾಯಿಸಿದೆ.

ಈ ಕುರಿತು ಸಂಘದ ನಿಯೋಗ ನಗರ ಶಾಸಕ ಡಾ.ಶಿವರಾಜ ಪಾಟೀಲ್‌ಗೆ ಭಾನುವಾರ ಮನವಿ ಸಲ್ಲಿಸಿ, ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಇರುವ ನ್ಯಾಯಾಲಯ ಸಂಕೀರ್ಣ ಶಿಥಿಲಗೊಂಡಿದ್ದು, ಹಲವು ಕೊಠಡಿಗಳ ಮೇಲ್ಛಾವಣಿ ಕುಸಿಯುತ್ತಿದೆ. ಲೋಕೋಪಯೋಗಿ ಇಲಾಖೆ ಸದರಿ ಕಟ್ಟಡ ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಿದ್ದು, ಹೊಸ ಕಟ್ಟಡಕ್ಕೆ ನ್ಯಾಯಾಲಯ ಸ್ಥಳಾಂತರ ಮಾಡಬೇಕಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಡಾ.ಶಿವರಾಜ ಪಾಟೀಲ್, ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಹಣಕಾಸು ಇಲಾಖೆ ಅನುಮೋದನೆಗೆ ಹೋಗಿದ್ದು, ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಹಣ ಬಿಡುಗಡೆ ಮಾಡಿ ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಜೆ.ಬಸವರಾಜ, ಕಾರ್ಯದರ್ಶಿ ಶಿವಕುಮಾರ ನಾಯಕ, ವಕೀಲರಾದ ಬಿ.ವಿ.ಪಾಟೀಲ್, ಎನ್.ಶಿವಶಂಕರ, ವಿಶ್ವನಾಥ ಪಾಟೀಲ್ ಇಟಗಿ, ಶಂಕರ ಪಾಟೀಲ್, ಜಹೀರ್ ಪಾಷಾ, ನಾರಾಯಣ ನಾಯಕ, ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net