ರೈತ ವಿರೋಧಿ ಕಾಯ್ದೆ ತಿದ್ದುಪಡಿ ಕೈಬಿಡಲಿ; ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಅಧಿಕಾರಿಗಳಿಗೆ ಮನವಿ ಸಲ್ಲಿಕೆ

20082020 Raichur Congress Protest
Published on

ರಾಯಚೂರು: ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು. ಕರೊನಾ ನಿಯಂತ್ರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್‌ನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಅಪರ ಜಿಲ್ಲಾಧಿಕಾರಿ ದುರಗೇಶ್‌ಗೆ ಮನವಿ ಸಲ್ಲಿಸಿ, ರೈತ ವಿರೋಧಿ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು. ಕರೊನಾ ನಿಯಂತ್ರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಹೈಕೋಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದ್ದು, ರೈತರು ಮತ್ತು ಕಾರ್ಮಿಕರಿಗೆ ಮಾರಕವಾಗಿರುವ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆದು ಕಾಯ್ದೆಗಳ ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು, ಮಾಜಿ ಶಾಸಕ ಸೈಯದ್ ಯಾಸೀನ್, ಮುಖಂಡರಾದ ಎ.ವಸಂತಕುಮಾರ, ಕೆ.ಶಾಂತಪ್ಪ, ಜಿ.ಬಸವರಾಜರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ನಿರ್ಮಲಾ ಬೆಣ್ಣಿ, ಶಶಿಕಲಾ ಭೀಮರಾಯ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net