

ರಾಯಚೂರು: ಇತ್ತೀಚೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವ್ಯವಸ್ಥೆಯಿಂದ ಅಂಗವಿಕಲರಿಗೆ ತೊಂದರೆ ಹಾಗೂ ಅವಮಾನವಾಗಿದೆ ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಶಿವಗೇನಿ ಅತ್ತನೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಡಿ.3ರಂದು ನಗರದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗವಿಕಲರಿಗೆ ರ‌್ಯಾಂಪ್ ವ್ಯವಸ್ಥೆಯಿಲ್ಲದೆ ತೊಂದರೆ ಉಂಟಾಗಿದ್ದು, ರ‌್ಯಾಂಪ್ ಇಲ್ಲದ ಕಾರಣ ಅಂಗವಿಕಲರಿಗೆ ವೇದಿಕೆ ಕೆಳಗೆ ಸನ್ಮಾನ ಮಾಡಲಾಗಿದೆ ಇದರಿಂದ ಅಂಗವಿಕಲರಿಗೆ ಅವಮಾನವೂ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ರ‌್ಯಾಂಪ್ ಇರಬೇಕು ಎಂಬ ನಿಯಮವನ್ನು ದಿನಾಚರಣೆಯಲ್ಲಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಅಂಗವಿಕಲರಿಗಾಗಿಯೇ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕಿದ್ದರೂ. ಅಧಿಕಾರಿಗಳು ತಾತ್ಕಾಲಿಕ ರ‌್ಯಾಂಪ್ ವ್ಯವಸ್ಥೆ ಮಾಡದೇ ನಿರ್ಲಕ್ಷೃ ವಹಿಸಿದ್ದಾರೆ. ಕೂಡಲೇ ನಿರ್ಲಕ್ಷೃ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಅಂಗವಿಕಲರಿಗಾದ ತೊಂದರೆಗೆ ಡಿಸಿ ಕೆ.ನಿತೀಶ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಸಲಹಾ ಸಮಿತಿ ಸದಸ್ಯ ಶಿವಶಂಕರ ಬಳೆ ಇದ್ದರು.