

ರಾಯಚೂರು: ಫ್ಯೂಚರ್ ಸೋಲ್ಜರ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸೇನೆಗೆ ಹಾಗೂ ಪೊಲೀಸ್ ಭರ್ತಿಗೆ ಅನುಕೂಲವಾಗುವಂತೆ ಆಸಕ್ತ ಯುವಕರಿಗೆ ಶಾರೀರಿಕ ಕ್ಷಮತೆ, ಮಾನಸಿಕ ಸದೃಢತೆ ಹಾಗೂ ಲಿಖಿತ ತರಗತಿಗಳ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಹಾಗೂ ನಿವೃತ್ತ ಯೋದ ಎಂ.ಡಿ.ಸಲೀಂ ಹುಸೇನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, 12 ವರ್ಷಗಳ ಮಾಸ್ಟರ್ ಟ್ರೈನರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ನಿವೃತ್ತನಾಗಿದ್ದೇನೆ. ದೇವಸುಗೂರಿನಲ್ಲಿ ಆಸಕ್ತ ಯುವಕರಿಗೆ ಉಚಿತವಾಗಿ ಸೇನಾ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ, ವಸತಿ ಉಚಿತವಾಗಿದೆ. ಊಟದ ಶುಲ್ಕವನ್ನು ಮಾತ್ರ ಅಭ್ಯರ್ಥಿಗಳು ಭರಿಸಬೇಕಾಗುತ್ತದೆ ಎಂದು ತಿಳಿಸಿದರು. ಮೂರು ತಿಂಗಳ ಅವಧಿಯ ತರಬೇತಿ ನೀಡಲಾಗುತ್ತದೆ. 16 ವರ್ಷದ ಮೇಲ್ಪಟ್ಟವರು ಈ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಈ ಸದರ್ಭದಲ್ಲಿ ಅಕಾಡೆಮಿಯ ಖಜಾಂಚಿ ಎಚ್.ಮಲ್ಲೇಶ, ಸದಸ್ಯ ರಮೇಶ, ಪ್ರಮುಖರಾದ ಸಾಜೀದ್ ಹುಸೇನ್, ಹರೀಶ ಮಡಿವಾಳ ಸೇರಿದಂತೆ ಇತರರಿದ್ದರು.